

ಹಿರೇಕೆರೂರ: ಪಟ್ಟಣದ ಐತಿಹಾಸಿಕ ದುರ್ಗಾದೇವಿ ಕೆರೆಗೆ ನೀರು ಹರಿಸುವ ಕಾಲುವೆಯಲ್ಲಿ ಕೊಳಕು ಸೇರಿಕೊಂಡು ದುರ್ನಾತ ಬೀರುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯುಂಟಾಗಿದೆ.
ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆಗೆ ನೀರು ಹರಿದು ಹೋಗುವ ಕಾಲುವೆ ತುಂಬೆಲ್ಲ ಕಸ, ಗಿಡಗಂಟಿಗಳು ಬೆಳೆದಿವೆ. ಜತೆಗೆ ಪಟ್ಟಣದ ಕೊಳಕು ನೀರು, ತ್ಯಾಜ್ಯಗಳು ಬಂದು ಸೇರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೊಳಚೆ ನಿರ್ವಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಪಪಂ ಅಧಿಕಾರಿಗಳು, ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇತ್ತ ಕಾಲುವೆ ನಿರ್ವಹಣೆ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯವರೂ ಮೌನ ವಹಿಸಿದ್ದಾರೆ.
650 ಎಕರೆ ವಿಸ್ತೀರ್ಣ ಹೊಂದಿರುವ ದುರ್ಗಾದೇವಿ ಕೆರೆಗೆ ಈ ಕಾಲುವೆ ಮೂಲಕ ನೀರು ಬಂದು ಸೇರುತ್ತದೆ. ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಗೆ ಸಂಬಂಧಿಸಿದ ಕಾಲುವೆಗೆ ಸುಣ್ಣದ ಕಾಲುವೆ ಎಂದೂ ಕರೆಯುತ್ತಾರೆ. ಕಾಲ್ವೀಹಳ್ಳಿಯ ರಾಮನಕೆರೆ ಮೂಲಕ ದುರ್ಗಾದೇವಿ ಕೆರೆಗೆ ನೀರು ಹರಿದು ಬರುತ್ತದೆ. ಹಳ್ಳದ ರೂಪದಲ್ಲಿದ್ದ ಕಾಲುವೆಯನ್ನು 2014-15ರಲ್ಲಿ ಕೆರೆ ಅಭಿವೃದ್ಧಿ ನಾಡಿನ ಶ್ರಯೋಭಿವೃದ್ಧಿ ಯೋಜನೆಯಡಿ 2.80 ಕೋಟಿ ರೂ ಅನುದಾನದಲ್ಲಿ 1.6 ಕಿ.ಮೀ. ಉದ್ದದವರೆಗೆ ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನು 1 ಕಿ.ಮೀ. ಕಾಲುವೆ ನಿರ್ಮಾಣ ಬಾಕಿ ಇದೆ. ತುಂಗಭದ್ರಾ, ಕುಮದ್ವತಿ ನದಿ ಮೂಲದಿಂದ ದುರ್ಗಾದೇವಿ ಏತ ನೀರಾವರಿ ಮೂಲಕ ಕೆರೆಯನ್ನು ತುಂಬಿಸುವ ಯೋಜನೆ ಪೂರ್ಣಗೊಂಡಿದೆ. ಈ ನೀರು ಕೂಡ ಇದೇ ಕಾಲುವೆ ಮೂಲಕ ಕೆರೆಗೆ ಹೋಗುತ್ತಿದೆ.
ಈ ಬಗ್ಗೆ ಪಟ್ಟಣ ಪಂಚಾಯಿತಿಯವರನ್ನು ಕೇಳಿದರೆ ಇದು ಸಣ್ಣನೀರಾವರಿ ಇಲಾಖೆಗೆ ಸೇರಿದ್ದು ಅವರೇ ನಿರ್ವಹಿಸಬೇಕಿದೆ ಎನ್ನುತ್ತಾರೆ. ಇತ್ತ ಸಣ್ಣನೀರಾವರಿ ಇಲಾಖೆಯವರನ್ನು ಕೇಳಿದರೆ, ಕೆರೆ ಹಾಗೂ ಕಾಲುವೆಯನ್ನು ಪಪಂಗೆ ಹಸ್ತಾಂತರಿಸಲು ಯತ್ನಿಸಲಾಗುತ್ತಿದ್ದು, ಅದು ಈವರೆಗೆ ಸಾಧ್ಯವಾಗಿಲ್ಲ. ಕಾಲುವೆ ನಿರ್ವಹಣೆಗೆ ಬಾಕಿ ಇರುವ 1 ಕಿ.ಮೀ. ಕಾಮಗಾರಿಗೆ ಅನುದಾನದ ಕೊರತೆ ಇದೆ. ಅದರ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಅನುದಾನ ಬಂದ ಕೂಡಲೇ ಕಾಲುವೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆ ರೋಗ ಹರಡುವ ಮೊದಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸಬೇಕು. ಬಾಕಿ ಇರುವ ಕಾಲುವೆ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಕಾಲುವೆ ಅಕ್ಕಪಕ್ಕದಲ್ಲಿ ಮನೆ, ಅಂಗಡಿಗಳಿವೆ. ನಿತ್ಯ ಈ ಕಾಲುವೆಯಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ಅಲ್ಲದೆ, ಪಟ್ಟಣದ ಚರಂಡಿ ನೀರು, ಇಲ್ಲಿ ಸೇರುತ್ತಿದೆ. ಸ್ವಚ್ಛಗೊಳಿಸಲು ಯಾವ ಇಲಾಖೆಯೂ ಮುಂದಾಗುತ್ತಿಲ್ಲ. ರೋಗ ರುಜೀನಗಳು ಹೆಚ್ಚಾಗಿವೆ. ಸೊಳ್ಳೆ ಕಾಟ ವೀಪರಿತವಾಗಿದೆ. | ಶುಭಾಕರ ಹಂಪಾಳಿ, ಸ್ಥಳಿಯ ನಿವಾಸಿ ಪದೇಪದೆ ಕಾಲುವೆಯಲ್ಲಿ ಕಸ ಸಂಗ್ರಹಗೊಳ್ಳುತ್ತಿದೆ. ಗಿಡ ಗಂಟಿಗಳು ಬೆಳೆಯುತ್ತಿವೆ. 1 ಕಿ.ಮೀ. ಕಾಲುವೆ ನಿರ್ಮಾಣ ಬಾಕಿಯಿದ್ದು, ಅನುದಾನದ ಕೊರತೆಯಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಅನುದಾನ ಬಂದ ಕೂಡಲೇ ಅಭಿವೃದ್ಧಿಪಡಿಸಲಾಗುವುದು. | ಎಸ್.ವಿ. ಹಾವನೂರ ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್