ಕಪ್ಪುಗೌನು ಧರಿಸುವ ಮಹಾಪೌರ ಯಾರು?

Who is Mahapaura who wears black gown
ವಿಜಯಪುರ ಮಹಾನಗರ ಪಾಲಿಕೆ.
Published on

ವಿಜಯಪುರ : ಬರೋಬ್ಬರಿ ವರ್ಷದ ಎರಡು ತಿಂಗಳ ಬಳಿಕ ನಡೆಯುತ್ತಿರುವ ಮೇಯರ್- ಉಪಮೇಯರ್ ಚುನಾವಣೆಗೆ ಮಹಾನಗರ ಪಾಲಿಕೆ ಕಳೆಗಟ್ಟಿದ್ದು, ಕಪ್ಪುಗೌನು ಧರಿಸುವ ಮಹಾಪೌರ ಯಾರು? ಎಂಬ ಕುತೂಹಲ ಗರಿಗೆದರಿದೆ.

ಕಳೆದ 2022 ಅ. 28 ರಂದೇ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದು, ಎಲ್ಲವೂ ಸುರಳಿತವಾಗಿದ್ದರೆ ಇಷ್ಟೊತ್ತಿಗಾಗಲೇ ಮೇಯರ್- ಉಪ ಮೇಯರ್ ಆಯ್ಕೆಗೊಳ್ಳುವ ಮೂಲಕ ಸುಭದ್ರ ಆಡಳಿತಕ್ಕೆ ವರ್ಷ ತುಂಬುತ್ತಿತ್ತು.

ಆದರೆ, ಮೀಸಲಾತಿ ಗೊಂದಲದಿಂದಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ವಿಳಂಬವಾಯಿತು. ನ್ಯಾಯಾಲಯದ ತಡೆಯಾಜ್ಞೆ ತೆರವು ಬಳಿಕ ಜ. 9 ರಂದು ಚುನಾವಣೆ ನಡೆಸಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಆ ಪ್ರಕಾರ ಮೇಯರ್‌ಗಿರಿಗೆ ಇನ್ನಿಲ್ಲದ ಗುದ್ದಾಟ ನಡೆದಿದೆ.

ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಪರಿಶಿಷ್ಟ ಪಂಗಡದಿಂದ ವಾರ್ಡ್ ಸಂಖ್ಯೆ 18ರ ಕಾಂಗ್ರೆಸ್ ಸದಸ್ಯ ದಿನೇಶ ಹಳ್ಳಿ ಏಕೈಕ ಸದಸ್ಯರಾಗಿರುವ ಕಾರಣ ಅನಾಮತ್ತಾಗಿ ಉಪ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಒಲಿದು ಬಂದಿದೆ.

ಇನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ ಪಕ್ಷೇತರ, ಜೆಡಿಎಸ್ ಹಾಗೂ ಎಐಎಂಐಎಂ ಸದಸ್ಯರು ಮೇಯರ್‌ಗಿರಿ ನೀಡುವ ಪಕ್ಷ ಸೇರ್ಪಡೆಗೊಳ್ಳುವ ಉಮೇದು ವ್ಯಕ್ತಪಡಿಸಿದ್ದರಿಂದ ರಣಕಣ ರಂಗೇರುವಂತೆ ಮಾಡಿದೆ.

ಪಕ್ಷವಾರು ಬಲಾಬಲ

ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರ-5, ಜೆಡಿಎಸ್-1, ಎಐಎಂಐಎಂ-2 (ಉಚ್ಚಾಟಿತ) ಸದಸ್ಯ ಬಲವಿದ್ದು, ಇದರಲ್ಲಿ ವಾರ್ಡ್ ನಂ.29 ರ ಬಿಜೆಪಿ ಸದಸ್ಯ ವಿಜಯಕುಮಾರ ಬಿರಾದಾರ ನಿಧನರಾಗಿದ್ದಾರೆ. ಹೀಗಾಗಿ ಬಿಜೆಪಿ ಸಂಖ್ಯಾಬಲ-16ಕ್ಕೆ ಕುಸಿದಿದೆ. ಇನ್ನುಳಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಕೂಡ ಮತದಾನದ ಹಕ್ಕು ಹೊಂದಿದ್ದು, ಸಂಖ್ಯಾಬಲ 18ಕ್ಕೆ ಏರಲಿದೆ. ಕಾಂಗ್ರೆಸ್‌ನಿಂದ 10 ಸದಸ್ಯರಿದ್ದು, ಶಾಸಕರಾದ ಎಂ.ಬಿ. ಪಾಟೀಲ, ವಿಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ ಹಾಗೂ ಪ್ರಕಾಶ ರಾಠೋಡ ಕೂಡ ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಸಂಖ್ಯಾಬಲ 14ಕ್ಕೆ ಏರಿಕೆಯಾಗಲಿದೆ. ಇತ್ತೀಚೆಗಷ್ಟೇ ಪಕ್ಷೇತರ, ಜೆಡಿಎಸ್ ಹಾಗೂ ಎಐಎಂಐಎಂ ಸೇರಿ ಏಳು ಜನ ಕಾಂಗ್ರೆಸ್ ಸೇರ್ಪಡೆಯಾಗದಿದ್ದು, ಸದ್ಯ ಕಾಂಗ್ರೆಸ್ ಬತ್ತಳಿಕೆಯಲ್ಲಿ 21 ಸದಸ್ಯ ಬಲವಿದೆ.

ಮ್ಯಾಜಿಕ್ ಸಂಖ್ಯೆ 21: ಸದಸ್ಯರು, ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರೆಲ್ಲರೂ ಸೇರಿ ಒಟ್ಟು ಮತದಾರರ ಸಂಖ್ಯೆ 41 ಆಗಲಿದ್ದು, ಬಿಜೆಪಿ ಸದಸ್ಯನ ಅಕಾಲಿಕ ನಿಧನದಿಂದಾಗಿ ಆ ಸಂಖ್ಯೆ 40ಕ್ಕೆ ಇಳಿದಿದೆ. ಹೀಗಾಗಿ ಬಹುಮತ ಸಾಬೀತಿಗೆ 21 ಸದಸ್ಯ ಬಲದ ಅಗತ್ಯವಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ತನ್ನ ಸದಸ್ಯ ಬಲ ಹೊಂದಿಸಿಕೊಂಡಿದೆ. ಬಿಜೆಪಿಗೆ 17 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹೆಚ್ಚು ಸ್ಥಾನ ಹೊಂದಿದ್ದರೂ ಬಿಜೆಪಿಗೆ ಸದಸ್ಯನೋರ್ವನ ಅಕಾಲಿಕ ನಿಧನ ಆಘಾತ ತಂದಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಸೇರಿದರೆ ಮತದಾರರ ಸಂಖ್ಯೆ ಒಟ್ಟು 18 ಕ್ಕೆ ಏರಿಕೆಯಾಗಲಿದ್ದು, ಇನ್ನೂ 3 ಮತದಾರರ ಅವಶ್ಯಕತೆ ಬೀಳಲಿದೆ.

ಹೇಗಿದೆ ಲೆಕ್ಕಾಚಾರ?: ಪಕ್ಷೇತರ ಸದಸ್ಯರಾದ ಅಶೋಕ ನ್ಯಾಮಗೌಡ, ವಿಮಲಾ ರಫೀಖ್ ಖಾನೆ, ಅಲ್ತಾಫ್ ಇಟಗಿ, ಜೆಡಿಎಸ್ ಸದಸ್ಯೆ ಸುಮಿತ್ರಾ ರಾಜು ಜಾಧವ, ಎಂಐಎಂಐಎಂ ನ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆಂದು ಈಗಾಗಲೇ ಕಾಂಗ್ರೆಸ್ ಘೋಷಿಸಿಕೊಳ್ಳುವ ಮೂಲಕ ತನ್ನ ಸಂಖ್ಯಾಬಲವನ್ನು 21 ಸ್ಪಷ್ಟವಾಗಿದೆ ಎಂದು ಬೀಗುತ್ತಿದೆ. ಈಗಾಗಲೇ ಸದಸ್ಯರೆಲ್ಲರೂ ಅಜ್ಮೀರ್ ಸೇರಿದಂತೆ ಬೇರೆ ಬೇರೆ ಕಡೆ ಪ್ರವಾಸ ಮುಗಿಸಿಕೊಂಡು ಮತದಾನಕ್ಕಾಗಿ ಮರಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ತನ್ನ ಸದಸ್ಯ ಬಲ ಹೊಂದಿಸಲು ಸರಣಿ ಸಭೆ ಕೂಡ ನಡೆಸಿದೆ. ಬಿಜೆಪಿಯೇತರ ಓರ್ವ ಸದಸ್ಯ ತಮ್ಮ ಜೊತೆಗಿದ್ದು, ಇನ್ನೂ ಎರಡು ಸ್ಥಾನಗಳಿಗಾಗಿ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್‌ನ ಆಂತರಿಕ ಕಚ್ಚಾಟದ ಲಾಭ ಪಡೆದು ಸ್ಪಷ್ಟ ಬಹುಮತ ಸಾಬೀತು ಪಡಿಸುವ ವಿಶ್ವಾಸ ಬಿಜೆಪಿ ಪಾಳಯದಲ್ಲಿದೆಯಾದರೂ ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ವಾರ್ಡ್ ನಂ. 34ರ ಸದಸ್ಯೆ ಮಹೇಜಬಿನ ಅಬ್ದುಲ್‌ರಜಾಕ ಹೊರ್ತಿ ಹೆಸರು ಚಲಾವಣೆಯಲ್ಲಿದೆಯಾದರೂ ಇನ್ನೂ ಸ್ಪಷ್ಟತೆ ಇಲ್ಲ. ಮಹೇಜಬಿನಗೆ ಪಕ್ಷೇತರ ಹಾಗೂ ಅನ್ಯ ಪಕ್ಷದ ಸದಸ್ಯರ ಆಕ್ಷೇಪ ವ್ಯಕ್ತವಾಗುತ್ತಿದ್ದು ಕೊನೆಯ ಕ್ಷಣದವರೆಗೂ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಇದೇ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆಯಾದರೂ ತನ್ನ ಅಭ್ಯರ್ಥಿ ಯಾರು ಎಂಬುದನ್ನೂ ಕೊನೇ ಕ್ಷಣದವರೆಗೂ ಗೌಪ್ಯವಾಗಿರಿಸಿದೆ. ಹೀಗಾಗಿ ಪಕ್ಷೇತರ, ಎಐಎಂಐಎಂ (ಉಚ್ಚಾಟಿತ) ಸದಸ್ಯರು ಅಥವಾ ಜೆಡಿಎಸ್ ಅಭ್ಯರ್ಥಿ ಮೇಯರ್ ಆದರೂ ಅಚ್ಚರಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net