ಜೋಶಿಗೆ ಕಾಂಗ್ರೆಸ್​ನಿಂದ ಎದುರಾಳಿ ಯಾರು?

Joshi Shetter munenkoppa
Published on

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಕಾಂಗ್ರೆಸ್​ನಿಂದ ಅಖಾಡಕ್ಕೆ ಇಳಿಯುವವರು ಯಾರು? ಜಗದೀಶ ಶೆಟ್ಟರ್ ಸ್ಪರ್ಧಿಸುವುದು ನಿಜವೇ? ಅಥವಾ ಹೊಸ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್​ನಲ್ಲಿ ಹುಡುಕಾಟ ನಡೆದಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ಲೋಕಸಭೆ ಚುನಾವಣೆಗೆ ಇನ್ನೂ ಎಂಟು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಬಿಜೆಪಿಯಿಂದ ಪ್ರಹ್ಲಾದ ಜೋಶಿ ಸ್ಪರ್ಧಿಸುವುದು ನಿಕ್ಕಿ ಎನ್ನುತ್ತಿವೆ ಪಕ್ಷದ ಮೂಲಗಳು. ಆದರೂ ಜೋಶಿ ಅವರು ಕ್ಷೇತ್ರ ಬದಲಾಯಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆಯಾದರೂ ಇಂಥ ಬೆಳವಣಿಗೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ.

ಬಿಜೆಪಿ ಹುರಿಯಾಳುವಿನ ಬಗ್ಗೆ ಸ್ಪಷ್ಟತೆ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಜೋಶಿ ಅವರ ವಿರುದ್ಧ ಕಣಕ್ಕಿಳಿದವರು ವಿನಯ ಕುಲಕರ್ಣಿ. 2019ರ ಚುನಾವಣೆಯಲ್ಲಿ ವಿನಯ 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು. ಸದ್ಯದ ಸ್ಥಿತಿಯಲ್ಲಿ ವಿನಯ ಮತ್ತೆ ಕಣಕ್ಕಿಳಿಯಲಾರರು. ಇದೀಗ ಶಾಸಕರಾಗಿದ್ದರೂ ಯೋಗೀಶಗೌಡ ಕೊಲೆ ಪ್ರಕರಣದಿಂದಾಗಿ ಕ್ಷೇತ್ರಕ್ಕೂ ಕಾಲಿಡದ ದಿಗ್ಬಂಧನ ಇದೆ. ಹೀಗಾಗಿ, ಯಾರು ಹಿತವರು ಎನ್ನುವ ಕುರಿತಾಗಿ ಕಾಂಗ್ರೆಸ್​ನಲ್ಲಿ ಅವಲೋಕನ ನಡೆದಿದೆ.

ನಿಕ್ಕಿಯಾಗಿಲ್ಲ ಶೆಟ್ಟರ್ ಸ್ಪರ್ಧೆ

ಜಗದೀಶ ಶೆಟ್ಟರ್ ಅವರೇ ಪ್ರಹ್ಲಾದ ಜೋಶಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಆದರೆ, ಜಗದೀಶ ಶೆಟ್ಟರ್ ಅವರು ಈ ಬಗ್ಗೆ ಖಾತರಿ ಪಡಿಸುತ್ತಿಲ್ಲ. ಪಕ್ಷ ಈ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುತ್ತಾರೆ ಶೆಟ್ಟರ್.

ಸೆಂಟ್ರಲ್ ಕ್ಷೇತ್ರದಿಂದ ಸೋತ ಬಳಿಕ ಮುಂದಿನ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಶೆಟ್ಟರ್ ಲೋಕಸಭೆಗೆ ಪ್ರವೇಶ ಮಾಡುವರು ಎನ್ನುವ ಮಾತಿತ್ತು. ಆದರೀಗ ಲೋಕಸಭಾ ಚುನಾವಣೆ ವೇಳೆ ಉತ್ತರ ಕರ್ನಾಟಕ ಭಾಗದ ಆಯ್ದ ಕ್ಷೇತ್ರಗಳ ಉಸ್ತುವಾರಿ ಹೊರಲಿರುವ ಶೆಟ್ಟರ್, ಸ್ವತಃ ಕಣಕ್ಕಿಳಿಯುವ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಇದೇ ವೇಳೆ ಪಕ್ಷ ಎಂಎಲ್​ಸಿ ಸ್ಥಾನ ನೀಡಿರುವುದರಿಂದ ಜಿಲ್ಲೆಯ ರಾಜಕೀಯ ವಿಚಾರದಲ್ಲಿ ಮುನ್ನೆಲೆಯಲ್ಲಿ ನಿಂತು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗಾಗಿ, ಲೋಕಸಭೆಗೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದಲ್ಲಿಯೂ ಶೆಟ್ಟರ್ ಅವರ ಅಭಿಪ್ರಾಯ ಪ್ರಮುಖವೆನಿಸಲಿದೆ. ತಾವೇ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಬಹುದು ಅಥವಾ ತಾವು ಸೂಚಿಸಿದ ವ್ಯಕ್ತಿಗೆ ಅವಕಾಶ ಕೋರಬಹುದು. ಹಾಗಂತ ಶೆಟ್ಟರ್ ಅವರೂ ಈ ವಿಚಾರದಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತ ಪಡಿಸದಾಗಿದ್ದಾರೆ. ಪಕ್ಷದ ವರಿಷ್ಠರೂ ಈ ಬಗ್ಗೆ ನಿರ್ಧಾರಕ್ಕೆ ಬರುತ್ತಿಲ್ಲ. ಹೀಗಾಗಿ, ಕಾಂಗ್ರೆಸ್ ಹುರಿಯಾಳು ಯಾರು ಎನ್ನುವುದು ಪ್ರಶ್ನಾರ್ಥಕವಾಗಿದೆ.

ಯುವಕರಿಗೆ ಮಣೆ?

ಪ್ರಹ್ಲಾದ ಜೋಶಿ ಅವರ ವಿರುದ್ಧ ಸೆಣೆಸಲು ಯುವಕರಿಗೆ ಅಥವಾ ಹೊಸ ಮುಖಗಳಿಗೆ ಮಣೆ ಹಾಕಬೇಕು ಎನ್ನುವ ಬಗ್ಗೆಯೂ ಪಕ್ಷದಲ್ಲಿ ಚಿಂತನೆ ನಡೆದಿದೆ. ಧಾರವಾಡ ಲೋಕಸಭೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 4 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಬಲವನ್ನು ಇಟ್ಟುಕೊಂಡು ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಎನ್ನುವ ಪ್ರಸಂಗ ಬಂದರೆ ಮತ್ತೆ ಶಾಕೀರ ಸನದಿ ಹೆಸರು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಲಿಂಗಾಯತರಿಗೆ ಮಣೆ ಹಾಕಬೇಕು ಎನ್ನುವುದಾದರೆ ರಜತ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ ಇತರರು ಆಕಾಂಕ್ಷಿಗಳು.

ಮುನೇನಕೊಪ್ಪ ‘ಕೈ’ ಹಿಡಿಯುವುದು ಸುಳ್ಳು

ನವಲಗುಂದ ಕ್ಷೇತ್ರದಿಂದ ಬಿಜೆಪಿಯಿಂದ ಸೋತಿರುವ ಶಂಕರಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಮುನೇನಕೊಪ್ಪ ಅವರು ಶೆಟ್ಟರ್ ಅವರಿಗೆ ಆಪ್ತ ಎನ್ನುವುದೇ ಈ ಮಾತಿಗೆ ಕಾರಣ. ಮುನೇನಕೊಪ್ಪ ಅವರನ್ನು ಕಾಂಗ್ರೆಸ್​ಗೆ ಕರೆತಂದು ಲೋಕಸಭೆಗೆ ಟಿಕೆಟ್ ಕೊಡಿಸಲಾಗುತ್ತದೆಯಂತೆ. ಆದರೆ, ಈ ಮಾತನ್ನು ಮುನೇನಕೊಪ್ಪ ನಿರಾಕರಿಸಿದ್ದಾರೆ. ಅಂತಹ ಯಾವುದೇ ಬೆಳವಣಿಗೆ ಇಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net