ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು? : ಎಚ್.ಡಿ. ರೇವಣ್ಣ

ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು? : ಎಚ್.ಡಿ. ರೇವಣ್ಣ
Published on

ಮೈಸೂರು: ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು? ಸದ್ಯಕ್ಕೆ ದೇವರ ಮೇಲೆ ಬಾರ ಹಾಕಿದ್ದೇನೆ. ನನಗೆ ನ್ಯಾಯಾಂಗದ ಬಗ್ಗೆ ಗೌರವ ಇದೆ, ದೇವರ ಮೇಲೆ ನಂಬಿಕೆ ಇದೆ. ಹೀಗಾಗಿ ನನಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾನು ಪುತ್ರ ಪ್ರಜ್ವಲ್‌ನನ್ನು ಭೇಟಿ ಮಾಡಲು ಹೋಗುವುದಿಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತ ಹೇಳುತ್ತಾರೆ. ಹೀಗಾಗಿ ನಾನು ಭೇಟಿಗೆ ಹೋಗುವುದಿಲ್ಲ. ನಿನ್ನೆ ನನ್ನ ಪತ್ನಿ ಹೋಗಿ ಬಂದಿದ್ದಾರೆ. ಮಗ ಅಲ್ವ, ಹೀಗಾಗಿ ಹೋಗಿದ್ದಾರೆ ಅಷ್ಟೆ. ತಾಯಿ-ಮಗ ಏನು ಮಾತಾಡಿದ್ದಾರೋ ನನಗೆ ಗೊತ್ತಿಲ್ಲ, ನಾನು ಕೇಳಲೂ ಹೋಗಿಲ್ಲ ಎಂದರು.

ನನ್ನ ಮಗ ಸೂರಜ್ ರೇವಣ್ಣ ಮಹಾನ್ ದೈವಭಕ್ತ. ಅವರು ಬಹಳ ಬೇಗ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳಿದರು.

ಎಂಥೆಂತವರಿಗೋ ಕಷ್ಟ ಬರುತ್ತದೆ, ಅಂಥದ್ರಲ್ಲಿ ನಮ್ಮದು ಏನಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲೇ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ. ರಾಜಕೀಯದಲ್ಲಿ ಇಂಥವೆಲ್ಲ ಇರುತ್ತದೆ, ಇದಕ್ಕೆಲ್ಲ ಹೆದರಿಕೊಂಡರೆ ಮನೆ ಸೇರಿಕೊಳ್ಳಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net