

ರಾಯಚೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಯಾರಿಗೆ ಲಾಭ, ನಷ್ಟ ಅನ್ನುವುದಕ್ಕಿಂತ ಅವರು ಯಾವ ಕಾರಣಕ್ಕೆ ಒಂದಾಗುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸ್ಥಳೀಯ ಗ್ರಾಮೀಣ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿಯಾ ಇಲ್ಲವೇ ಸಿದ್ಧಾಂತವಾದ ರಾಜಕಾರಣಿಯಾ ಎನ್ನುವುದು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ದು ಯಾರು? ಕಾಂಗ್ರೆಸ್ ಜತೆಗಿದ್ದಾಗ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ಜತೆಗೆ ಅವರು ಕೈಜೋಡಿಸುತ್ತಿದ್ದಾರೆ. ಅವರಿಗೆ ಸಿದ್ಧಾಂತವಾದವಲ್ಲ, ಅವಕಾಶವಾದಿ ರಾಜಕಾರಣವಾಗಿದೆ.
ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಬಿಜೆಪಿ ಜತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಸಿದಂತೆ ಶಾಸಕರು ಒಂದು ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದರೆ ಅದು ಸ್ವಾಗತಾರ್ಹ. ನಾವು ರಾಜಕಾರಣದಲ್ಲಿ ಇರುವುದು ಸಿದ್ಧಾಂತದ ಆಧಾರದ ಮೇಲೆ ಹೊರತು ವೈಯಕ್ತಿಕ ಲಾಭಕ್ಕಲ್ಲ.
ಮೇಕೆದಾಟು ಯೋಜನೆ ಆ ಭಾಗದ ರೈತರ ಹಿತ ಕಾಯಲು ಮಾಡಿದ ಯೋಜನೆಯಾಗಿದೆ. ಅದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಮ್ಮ ನೀರನ್ನು ನಾವು ಉಪಯೋಗಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಮಳೆಯಿಲ್ಲದ ಕಾರಣ ಕೆಆರ್‌ಎಸ್‌ನಲ್ಲಿ ನೀರಿಲ್ಲದ ಕಾರಣ ಸಮಸ್ಯೆಯುಂಟಾಗಿದೆ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರೈತರ ಹಿತ ಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಉಪಸ್ಥಿತರಿದ್ದರು.