

ಗಜೇಂದ್ರಗಡ: ತಹಸೀಲ್ದಾರ್ ಅಂದ್ರ ನೀನೇನಾ? ಏನು ಇಷ್ಟು ಹೊತ್ತು ಮಲ್ಗಿದ್ದೇನು? ಏನಂತ ತಿಳ್ಕೊಂಡಿ. ಡಿಸಿ ಅವ್ರು ಹೊಗ್ಬ್ಯಾಡ ಅಂತ ಹೇಳ್ಯಾರಾ? ಏಯ್ ಬಾಳ ಎಚ್ಚರಿಕೆಯಿಂದಿರು ಇದು ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ವಿರುದ್ಧ ಮಾಜಿ ಸಚಿವ ಕಳಕಪ್ಪ ಬಂಡಿ ಹರಿಹಾಯ್ದ ಪರಿ.
ರೈತರ ಜಮೀನು, ದೇವಾಲಯ ಹಾಗೂ ಮಠ-ಮಾನ್ಯಗಳ ಆಸ್ತಿಗಳ ಮೇಲೆ ವಕ್ಪ್ ಬೋರ್ಡ್ ಹೆಸರು ದಾಖಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ, ರಾಜ್ಯ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆ ಅಂಗವಾಗಿ ಸೋಮವಾರ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮನವಿ ಸ್ವೀಕರಿಸಲು ತಡವಾಗಿ ಬಂದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ತರಾಟೆಗೆ ತೆಗೆದುಕೊಂಡರು.
ಸೂರ್ಯ, ಚಂದ್ರ ಇರೋವರೆಗೂ ಇರ್ತಿ ಅಂಥ ತಿಳ್ಕೊಂಡಿಯಾ. ಕಾಮನ್ ಸೆನ್ಸ್ ಇಲ್ವಾ ನಿಂಗೆ. ತಾಲೂಕು ಮ್ಯಾಜಿಸ್ಟ್ರೇಟ್ ಅದಿ ನೀ. ಇಬ್ರು ಪೊಲೀಸರು ಬಂದು ಹೇಳಿದ್ರೂ ಗೊತ್ತಾಗಲ್ವಾ. ಇದೆಲ್ಲಾ ಇಲ್ಲಿ ನಡೆಯಲ್ಲ. ಪ್ರತಿ ದಿನ ನಿನ್ನ ಮ್ಯಾಲೆ ಕಣ್ಣು ಇಡ್ಬೇಕಾಗುತ್ತ. ದುಡ್ಡ ಕೊಟ್ಟು ಪೋಸ್ಟಿಂಗ್ ಮಾಡಿಸ್ಕೊಂಡು ಬಂದಿರ್ತಿರಿ. ಮಂದಿಯಿಂದ ದುಡ್ಡು ತಗೊಳ್ಳದ ನಿಮ್ಮ ಕೆಲಸ ಎಂದು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.