

ಅವಿನಾಶ್ ಜೈನಹಳ್ಳಿ ಮೈಸೂರು
ನಗರದ ಪ್ರತಿಷ್ಠಿತ, ವಿದ್ಯಾವಂತರ ಸಂಖ್ಯೆ ಹೆಚ್ಚಿರುವ ‘ಚಾಮರಾಜ’ ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ಪ್ರಮುಖ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್‌ಗಾಗಿ ನಾನಾ ತಂತ್ರ ರೂಪಿಸುತ್ತಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳಿಬ್ಬರ ನಡುವೆ ನೇರ ಪೈಪೋಟಿ ಎದುರಾಗಿದೆ. ಇನ್ನು ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದರೂ ಮತ್ತೆ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ವಾಸು, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಹರೀಶ್‌ಗೌಡ ಅರ್ಜಿ ಸಲ್ಲಿಸಿದ್ದು, ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್(ಅವ್ವ ಮಾದೇಶ), ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಆಕಾಂಕ್ಷಿಗಳಾಗಿದ್ದಾರೆ.
ನಗರ ಹಾಗೂ ಗ್ರಾಮೀಣ ಎರಡೂ ರೀತಿಯ ಸಂಸ್ಕೃತಿಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಾಗಿದೆ. ಅಂತೆಯೆ, ಚುನಾವಣೆಗಳಲ್ಲಿ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುತ್ತಾರೆ ಮತ್ತು ಈವರೆಗೆ ಗೆದ್ದಿರುವ ಶಾಸಕರೆಲ್ಲರೂ ಅದೇ ಸಮುದಾಯದವರು ಎನ್ನುವುದೂ ವಿಶೇಷ. ಹಾಗಾಗಿ, ಈ ಬಾರಿಯೂ ಪ್ರಮುಖ ಮೂರೂ ಪಕ್ಷಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗೇ ಮಣೆ ಹಾಕಲು ಮುಂದಾಗಿವೆ. 1978ರಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಒಟ್ಟು 11 ಚುನಾವಣೆಗಳು ನಡೆದಿದ್ದು, 8 ಶಾಸಕರು ಆರಿಸಿ ಬಂದಿದ್ದಾರೆ. ಈ ಪೈಕಿ ಎಚ್.ಎಸ್.ಶಂಕರಲಿಂಗೇಗೌಡ ಸತತ 4 ಬಾರಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಟಿಕೆಟ್‌ಗೆ ಹೆಚ್ಚಿದೆ ಪೈಪೋಟಿ!
ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ವಾಸು ಹಾಗೂ ಕೆ.ಹರೀಶ್‌ಗೌಡ ನಡುವೆ ಸದ್ಯ ಹೆಚ್ಚು ಪೈಪೋಟಿ ಏರ್ಪಟ್ಟಿದೆ. ಎಐಸಿಸಿ ಸದಸ್ಯ, ಮಾಜಿ ಶಾಸಕ ವಾಸು ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಒಮ್ಮೆ ಗೆದ್ದಿದ್ದಾರೆ. ಈ ಹಿಂದೆ ಮೇಯರ್ ಆಗಿ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2023ರ ಚುನಾವಣೆಗೂ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಅಲ್ಲದೆ, ಇಡೀ ಜಿಲ್ಲೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಜಿಲ್ಲೆಯ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
ಮುಖಂಡ ಕೆ.ಹರೀಶ್‌ಗೌಡ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕ್ಷೇತ್ರದಲ್ಲಿ ಸತತ 12 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದ ಹರೀಶ್‌ಗೌಡ, ಎಚ್.ಡಿ.ರೇವಣ್ಣ ಅವರ ಶಿಷ್ಯರಾಗಿದ್ದರು. 2013 ಹಾಗೂ 2018ರ ಚುನಾವಣೆಗಳಲ್ಲೂ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2013ರಲ್ಲಿ ಜೆಡಿಎಸ್‌ನಿಂದ ಎಚ್.ಎಸ್. ಶಂಕರಲಿಂಗೇಗೌಡರಿಗೆ ಟಿಕೆಟ್ ನೀಡಿ, ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದಾಗಿ ಹರೀಶ್‌ಗೌಡರನ್ನು ದಳಪತಿಗಳು ಸಮಾಧಾನ ಮಾಡಿದ್ದರು. ಆದರೆ, 2018ರಲ್ಲೂ ಎಚ್.ಡಿ.ದೇವೇಗೌಡರ ಸಂಬಂಧಿ ಎಂಬ ಕಾರಣಕ್ಕೆ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು. ಇದರಿಂದ ಕೆರಳಿದ ಕೆ.ಹರೀಶ್‌ಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ ಪಾಲಿಕೆ ಚುನಾವಣೆಯಲ್ಲೂ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಇಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿರುವ ಅವರು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮದೇ ಕಾರ್ಯಕರ್ತರ ಪಡೆ ಹೊಂದಿರುವ ಇವರು, ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕೆ.ಹರೀಶ್‌ಗೌಡರಿಗೆ ಈ ಬಾರಿಯ ಟಿಕೆಟ್ ದೊರೆಯಲಿದೆ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆಯಾದರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಪ್ತರಾದ ವಾಸು ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬ್ಯಾಟ್ ಬೀಸಲಿದ್ದಾರೆ ಎನ್ನುವುದು ವಾಸು ಅವರ ಅಭಿಮಾನಿಗಳ ನಂಬಿಕೆಯಾಗಿದೆ.
ಹಾಲಿ ಶಾಸಕರು ಮುನ್ನೆಲೆಯಲ್ಲಿ!
ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದರೂ ಮತ್ತೆ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಬಿಜೆಪಿಯಲ್ಲಿ ಎಷ್ಟೇ ಆಕಾಂಕ್ಷಿಗಳಿದ್ದರೂ ಶಾಸಕ ಎಲ್.ನಾಗೇಂದ್ರ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ. ಸದ್ಯದ ಪರಿಸ್ಥಿತಿ ನೋಡಿದರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪೈಕಿ ಎಲ್.ನಾಗೇಂದ್ರ ಅವರೇ ಮುಂದಿರುವುದಂತೂ ಸತ್ಯ. ನಾಗೇಂದ್ರ ಅವರ ಜತೆಗೆ, ಬಿಜೆಪಿ ಮಾಜಿ ನಗರಾಧ್ಯಕ್ಷ ಡಾ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ, ಮುಖಂಡ ಜಯಪ್ರಕಾಶ್ ಕೂಡ ಆಕಾಂಕ್ಷಿಯಾಗಿದ್ದಾರೆ. ಇವರೆಲ್ಲರೂ 2018ರಲ್ಲೂ ಆಕಾಂಕ್ಷಿಯಾಗಿದ್ದರು. ಆದರೆ, ನಂದೀಶ್ ಪ್ರೀತಂ ಬಿಟ್ಟರೆ ಉಳಿದವರು ಇತ್ತೀಚೆಗೆ ಮುನ್ನೆಲೆಯಲ್ಲಿ ಇರದಿರುವುದು ಮೈನಸ್ ಪಾಯಿಂಟ್ ಆಗಿದೆ. ಶಾಸಕ ಎಲ್.ನಾಗೇಂದ್ರ ಅವರಿಗೆ ಪ್ಲಸ್ ಪಾಯಿಂಟ್. ಆದರೆ, ಕಳೆದ ಒಂದು ವರ್ಷದಿಂದ ನಂದೀಶ್ ಪ್ರೀತಂ ಕೂಡ ಕ್ಷೇತ್ರದ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಭಿಮಾನಿಗಳನ್ನು ಸಂಘಟಿಸುತ್ತಿದ್ದಾರೆ. ತಮ್ಮ ತಂದೆ ಮಾಜಿ ಶಾಸಕ ಎಚ್.ಎಸ್.ಶಂಕರಲಿಂಗೇಗೌಡರ ಅಭಿಮಾನಿಗಳನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಕೋರುತ್ತಿದ್ದಾರೆ. ತಮಗೆ ಟಿಕೆಟ್ ನೀಡುವಂತೆ ಬಿಜೆಪಿಯ ಪ್ರಮುಖ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.
ಶಾಸಕರು ಈ ಬಾರಿಯೂ ಬಿಜೆಪಿ ಟಿಕೆಟ್ ಪಡೆದು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಬೇಕು ಎಂಬ ಪಣ ತೊಟ್ಟಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ನಿರಂತರವಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟುತ್ತಿದ್ದು, ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದಾರೆ. ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಒಂದಲ್ಲ ಒಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ವಾರದಲ್ಲಿ ಒಂದೊಂದು ವಾರ್ಡ್‌ನಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದಾರೆ. ಆದರೆ, ಸದ್ಯ ಇರುವ ಆಕಾಂಕ್ಷಿಗಳಲ್ಲದೆ, ಮುಂದೆ ಎಲ್ಲರ ನಿರೀಕ್ಷೆಗೂ ಮೀರಿದ ಹೊಸ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್ ಹುಡುಕಿದರೂ ಆಶ್ಚರ್ಯಪಡಬೇಕಾಗಿಲ್ಲ.
ಜೆಡಿಎಸ್‌ನಲ್ಲೂ ಆಕಾಂಕ್ಷಿಗಳು!
ಜೆಡಿಎಸ್‌ನಿಂದ ನಗರ ಪಾಲಿಕೆ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್(ಅವ್ವ ಮಾದೇಶ), ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಆಕಾಂಕ್ಷಿಯಾಗಿದ್ದಾರೆ. 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ರಾಜಕೀಯದಿಂದ ದೂರ ಸರಿದಿದ್ದಾರೆ.
ಸಿ.ಮಹದೇಶ್ 2018ರ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಸಿದ್ಧರಾಗುತ್ತಿದ್ದರು. ಆದರೆ, ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿದ ಕಾರಣ ಅದು ಸಾಧ್ಯವಾಗಲಿಲ್ಲ. ಜೈಲಿನಿಂದಲೇ ತಮ್ಮ ಪತ್ನಿಯನ್ನು ಪಾಲಿಕೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದಾರೆ. ನ್ಯಾಯಾಲಯ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಬಿಡುಗಡೆಗೊಳಿಸಿದೆ. ಹಾಗಾಗಿ, 2023ರ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. ಇತ್ತ ಕೆ.ವಿ.ಶ್ರೀಧರ್, ಎಸ್.ಬಿ.ಎಂ.ಮಂಜು ಕೂಡ ಜೆಡಿಎಸ್ ಟಿಕೆಟ್‌ಗಾಗಿ ಕಾದು ಕುಳಿತಿದ್ದಾರೆ. ಅಂತಿಮವಾಗಿ ಬೇರೆ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವವರ ಪೈಕಿ ಯಾರಾದರೊಬ್ಬರು ಅಲ್ಲಿ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಟಿಕೆಟ್ ಪಡೆದರೂ ಆಶ್ಚರ್ಯಪಡಬೇಕಾಗಿಲ್ಲ.
ಇನ್ನು ಆಮ್ ಆದ್ಮಿ ಪಕ್ಷದ ಮಾಳವಿಕಾ ಗುಬ್ಬಿವಾಣಿ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ.