

ಬೆಂಗಳೂರು: ರಾಜಧಾನಿಯ ಐತಿಹಾಸಿಕ ಕರಗ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದರೂ, ಶ್ರೀ ಧಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಕುಟುಂತ್ತಾ ಸಾಗಿದೆ. ಇದರಿಂದ ಶಕ್ತ್ಯೋತ್ಸವದ ಕೇಂದ್ರ ಬಿಂದುವಾಗಿರುವ ದೇಗಲದಲ್ಲಿ ಸಿದ್ಧತಾ ಕಾರ್ಯ ನಡೆಸಲು ಅಡ್ಡಿಯಾಗಿದೆ.
ಪಾಲಿಕೆಯ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಧರ್ಮರಾಯಸ್ವಾಮಿ ದೇಗುಲದ ಬಳಿ ನಡೆಯುತ್ತಿರುವ ಕಾಮಗಾರಿಯ ಉಸ್ತುವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವು ಹಿರಿಯ ಅಧಿಕಾರಿಗಳು ಈ ರಸ್ತೆಯ ಸಮೀಪವೇ ವಾಹನದಲ್ಲಿ ತೆರಳುತ್ತಿದ್ದರೂ, ಸಮಸ್ಯೆಯನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಕಾಮಗಾರಿ ಆರಂಭಿಸುವ ಮುನ್ನವೇ ದೇಗಲದ ಸಮಿತಿಯವರು ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಕರಗ ಹಿನ್ನೆಲೆಯಲ್ಲಿ ಬೇಗನೆ ಕೆಲಸ ಪೂರ್ಣಗೊಳಿಸಲು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ್ದ ಅಧಿಕಾರಿಗಳು ಈಗ ಕಾಮಗಾರಿ ವಿಳಂಬವಾಗುತ್ತಿದ್ದರೂ, ಸಮಸ್ಯೆಗೆ ಪರಿಹಾರ ಹುಡುಕದೆ ಮೌನಕ್ಕೆ ಶರಣಾಗಿರುವುದು ಪಾಲಿಕೆ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.
ಪ್ರಸ್ತುತ ಧಮರಾಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ದೊಡ್ಡ ಕಂದಕ ತೆಗೆದು ಬೃಹತ್ ಗಾತ್ರದ ಕೊಳವೆ ಅಳವಡಿಸಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಂಥದ್ದೇ ಕಾಮಗಾರಿ ದೇಗುಲದ ಸಮೀಪದ ಎಸ್.ಪಿ. ರಸ್ತೆ ಆರಂಭದ ಸ್ಥಳ ಹಾಗೂ ಪಾಲಿಕೆಯ ಹೆರಿಗೆ ಆಸ್ಪತ್ರೆ ರಸ್ತೆಯಲ್ಲಿ ನಡೆಯುತ್ತಿದೆ. ಕೊಳವೆ ಜತೆಗೆ ವಿವಿಧ ಬಗೆಯ ಕೇಬಲ್ ಅಳವಡಿಸುವ ಕೆಲಸವೂ ನಡೆದಿದೆ. ಈ ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿದ್ದು, ಆ ರಸ್ತೆ ಮೂಲಕ ತೆರಳುವ ಪಾದಚಾರಿಗಳು ಪರದಾಡುವಂತಾಗಿದೆ.
ಇದಲ್ಲದೆ ಹಲವು ದಿನಗಳ ಹಿಂದೆಯೇ ಪಾಲಿಕೆಯ ಹೆರಿಗೆ ರಸ್ತೆ ಮೂಲಕ ಹಾಗುಹೋಗುತ್ತಿದ್ದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಕೆ.ಆರ್.ಮಾರುಕಟ್ಟೆ ಕಡೆಯಿಂದ ಬರುವ ಬಿಎಂಟಿಸಿ ಸಹಿತ ಇತರ ವಾಹನಗಳು ಟೌನ್‌ಹಾಲ್ ಜಂಕ್ಷನ್ ಮೂಲಕ ಸಾಗಬೇಕಿದೆ. ಇದು ಆ ಭಾಗದಲ್ಲಿ ದಟ್ಟಣೆಗೆ ಎಡೆಮಾಡಿಕೊಟ್ಟಿದೆ.
ಸಮನ್ವಯದ ಕೊರತೆ:
ಧರ್ಮರಾಯಸ್ವಾಮಿ ದೇಗುಲದ ರಸ್ತೆ ಹಾಗೂ ಎಸ್.ಪಿ. ರಸ್ತೆ ಸುತ್ತಮುತ್ತ ನಡೆದಿರುವ ಕಾಮಗಾರಿಗಳಲ್ಲಿ ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಕೊರತೆ ಉಂಟಾಗಿದೆ. ಇದರಿಂದಾಗಿ ಕೆಲಸ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಜಲಮಂಡಳಿ, ಬೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಒಂದಾಗಿ ಕೆಲಸ ಮಾಡದ ಕಾರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ನಿವಾರಿಸಿಕೊಂಡು ಕರಗ ಮಹೋತ್ಸವಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿಗೆ ದೇಗುಲದ ಸಮಿತಿಯವರು ಮನವಿ ಮಾಡಿದ್ದಾರೆ.
ಬೆಂಗಳೂರು ಕರಗಕ್ಕೆ ಹಲವು ದಿನಗಳ ಮೊದಲೇ ಸಿದ್ಧತೆ ನಡೆಸಬೇಕಾಗುತ್ತದೆ. ಇದನ್ನು ಗಮನಿಸಿಯೇ ಕಾಮಗಾರಿಯನ್ನು ಮೊದಲೇ ಕೈಗೆತ್ತಿಕೊಳ್ಳಬೇಕು, ಇಲ್ಲವೇ ಮುಂದೂಡಲು ಸಲಹೆ ನೀಡಲಾಗಿತ್ತು. ಆದರೀಗ ಪಾಲಿಕೆ ನೀಡಿದ ಭರವಸೆ ಹುಸಿಯಾಗಿದೆ. ಮುಖ್ಯ ಆಯುಕ್ತರು ಸ್ಥಳಪರಿಶೀಲನೆ ನಡೆಸಿ ಕರಗ ಉತ್ಸವ ಸರಾಗವಾಗಿ ನಡೆಯಲು ಸಹಕರಿಸಬೇಕು.
- ಪಿ.ಆರ್.ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ