

ಬೆಂಗಳೂರು: ರಾಜಧಾನಿಯ ರಸ್ತೆಗಳು ಪದೇ ಪದೆ ಕಿತ್ತು ಬರುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ರಸ್ತೆಗಳನ್ನಾಗಿಸಲು ಹಾಗೂ ಗುಂಡಿಮುಕ್ತ ನಗರವಾಗಿಸುವ ನಿಟ್ಟಿನಲ್ಲಿ ವೈಟ್ ಟಾಪಿಂಗ್ ಯೋಜನೆ ಜಾರಿಗೆ ಸರ್ಕಾರ ಆದ್ಯತೆ ನೀಡಿದೆ. ಈ ವರ್ಷ 1800 ಕೋಟಿ ರೂ. ವೆಚ್ಚದಲ್ಲಿ 157 ಕಿ.ಮೀ. ಉದ್ದದಷ್ಟು ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಅನುದಾನದಡಿ ಗಾಂಧಿನಗರ, ಚಾಮರಾಜಪೇಟೆ, ಮಲ್ಲೇಶ್ವರ ಹಾಗೂ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 200 ಕೋಟಿ ವೆಚ್ಚದಲ್ಲಿ 19.67 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬೀಳಬಾರದು ಎಂಬ ಉದ್ದೇಶದಿಂದ ವೈಟ್ ಟಾಪಿಂಗ್ ರಸ್ತೆ ಮಾಡಲಾಗುತ್ತಿದೆ. ಈ ರಸ್ತೆಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗುವುದು. ಈಗಾಗಲೇ 100 ಕಿ.ಮೀ.ಗೂ ಹೆಚ್ಚಿನ ಉದ್ದ ರಸ್ತೆಗಳನ್ನು ವೈಟ್ ಟಾಪಿಂಗ್ ಬದಲಾಯಿಸಲಾಗಿದೆ. ಇದರಿಂದ ರಸ್ತೆಗಳು ಗಟ್ಟುಮುಟ್ಟು ಇರಲಿದ್ದು, ವಾಹನಸಂಚಾರ ಸಲೀಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಕ್ಕೆ ಸೂಚನೆ:
ಒಟ್ಟು 157 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ವಾರದೊಳಗೆ 3-4 ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
200 ಕಿ.ಮೀ. ಉದ್ದದ ಹೊಸ ರಸ್ತೆ ನಿರ್ಮಾಣ:
ವೈಟ್ ಟಾಪಿಂಗ್ ಹೊರತುಪಡಿಸಿ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿರುವ ಮಾರ್ಗಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ 200 ಕಿ.ಮೀ. ಉದ್ದದ ರಸ್ತೆಗಳನ್ನು ಗುರುತಿಸಿದ್ದು, ಇವುಗಳನ್ನು ಶೀಘ್ರವೇ ಅಂತಿಮರೂಪ ನೀಡಿ ಹೊಸ ರಸ್ತೆಗಳನ್ನಾಗಿ ಮಾರ್ಪಡಿಸಲಾಗುವುದು. ಇವು ಕೂಡ ವೈಟ್ ಟಾಪಿಂಗ್ ರೀತಿ ಅಭಿವೃದ್ಧಿಗೊಳ್ಳಲಿವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಶಾಸಕರಾದ ಡಾ. ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಅಭಿಯಂತರ ಪ್ರಹ್ಲಾದ್ ಹಾಗೂ ಇತರ ಅಧಿಕಾರಿಗಳಿದ್ದರು.
ಡಿಸಿಎಂ ಪಾದರಕ್ಷೆ ಕಾಣೆ!:
ವೈಟ್ ಟಾಪಿಂಗ್ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆಗಾಗಿ ಶೇಷಾದ್ರಿಪುರದ ರಾಜೀವ್‌ಗಾಂಧಿ ವೃತ್ತಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಪಾದರಕ್ಷೆಯನ್ನು ಕಳೆದುಕೊಂಡು ಕೆಲಕ್ಷಣ ಕಸಿವಿಸಿಗೆ ಒಳಗಾದ ಪ್ರಸಂಗ ನಡೆಯಿತು. ಗುದ್ದಲಿಪೂಜೆ ನೆರವೇರಿಸಲು ತೊಟ್ಟಿದ್ದ ಶೂ ಕಳಚಿ ಪೂಜೆಯಲ್ಲಿ ಪಾಲ್ಗೊಂಡು ವಾಪಸ್ ಹೋಗುವಾಗ ಶೂ ಕಾಣದೆ ಡಿಸಿಎಂ ಗಲಿಬಿಲಿಗೆ ಒಳಗಾದರು. ಕೆಲಹೊತ್ತು ಹುಡುಕಾಡಿದರೂ ಶೂ ಕಾಣಲಿಲ್ಲ. ಕೊನೆಗೆ ತಮ್ಮ ಆಪ್ತರ ಮೂಲಕ ಕಾರಿನಲ್ಲಿದ್ದ ಇನ್ನೊಂದು ಜತೆ ಪಾದರಕ್ಷೆಯನ್ನು ಹಾಕಿಕೊಂಡು ಶಿವಕುಮಾರ್ ಮುಂದಿನ ಕಾರ್ಯಕ್ರಮದತ್ತ ಹೊರಟರು.