ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ

IMG-20250726-WA0074
Published on

ಆಲೂರು: ತಾಲೂಕಿನಲ್ಲಿ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿದ್ದು, ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ರೈತಾ ಒಕ್ಕೂಟಗಳ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಬಿ.ಧರ್ಮರಾಜ್ ತಿಳಿಸಿದ್ದಾರೆ.

ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ರೈತ ಮುಖಂಡರೊಂದಿಗೆ ಬಿಳಿ ಸುಳಿ ರೋಗದ ಬಗ್ಗೆ ಚರ್ಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೆಕ್ಕೆಜೋಳದಿಂದ ರೈತರು ನಷ್ಟ ಅನುಭವಿಸಲು ಕೃಷಿ ಇಲಾಖೆ ನಿರ್ಲಕ್ಷೃವೇ ಕಾರಣ. ಬಿತ್ತನೆ ಬೀಜ ಕಂಪನಿಗಳ ಜತೆ ಕೃಷಿ ಇಲಾಖೆ ಅಧಿಕಾರಿಗಳು ಶಾಮಿಲಾಗಿ ಕಳಪೆ ಗುಣಮಟ್ಟದ ಬಿತ್ತನೆ ಮೆಕ್ಕೆಜೋಳ ವಿತರಣೆ ಮಾಡಿದ್ದಾರೆ. ಆದ್ದರಿಂದಲೇ ಬಿತ್ತನೆ ಮಾಡಿದ ಸ್ವಲ್ಪ ದಿನಗಳಲ್ಲೇ ರೋಗಕ್ಕೆ ತುತ್ತಾಗುತ್ತಿವೆ ಎಂಬ ಮಾಹಿತಿ ಇದೆ. ಆದರೂ ರೈತರಿಗೆ ಮಾಹಿತಿ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿದರು.

ಒಂದು ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಲು ಸುಮಾರು 40-50 ಸಾವಿರ ರೂ. ಖರ್ಚು ಬರುತ್ತದೆ. ಆದ್ದರಿಂದ ರೈತರಿಗೆ ಸರಿಯಾದ ಪರಿಹಾರ ನೀಡಿ ನಷ್ಟ ಭರಿಸಬೇಕು. ಹುಣಸವಳ್ಳಿ ಗ್ರಾಮದಲ್ಲಿ 1975-76ರಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿಗೆ ಇದುವರೆಗೂ ಸಾಗುವಳಿ ಚೀಟಿ ನೀಡಿ ಅವರ ಹೆಸರಿಗೆ ಮಾಡಿಕೊಡಲು ಸಾಧ್ಯವಾಗಿಲ್ಲ. ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ. ಆದ್ದರಿಂದ ಶಾಸಕ ಸಿಮೆಂಟ್ ಮಂಜು ರೈತರಿಗೆ ಜಮೀನು ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.

ಗ್ರಾಮದ ಮುಖಂಡ ಎಚ್.ಬಿ.ಮಂಜುನಾಥ್ ಮಾತನಾಡಿ, ಮೆಕ್ಕೆಜೋಳ ದೀರ್ಘವಧಿ ಬೆಳೆ ಆಗಿರುವುದರಿಂದ ಬಿಳಿ ಸುಳಿ ರೋಗ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಆದ್ದರಿಂದ ರೈತರಿಗೆ ಪರಿಹಾರ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ವಿಜ್ಞಾನಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡಬೇಕು. ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಯಾವ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಅಣ್ಣೇಗೌಡ, ಶಿವರಾಜ್, ಸತೀಶ್, ಕುಮಾರ್, ರಜನಿಕಾಂತ್, ಪುಟ್ಟರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net