

ನೆಲಮಂಗಲ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಆಡಳಿತ ಮಂಡಳಿ ಮತ್ತು ಸದಸ್ಯರ ನಡುವೆ ಗುರುವಾರ ಗದ್ದಲ ನಡೆಯಿತು.
ಹಿಂದಿನ ಸಭೆಯಲ್ಲಿ ಚರ್ಚಿಸಿದ ಸಂಘದ ಆಡಳಿತ ಮಂಡಳಿಯ ಬಿ ತರಗತಿಯ 7 ಸದಸ್ಯ ಸ್ಥಾನಗಳಲ್ಲಿ ಮೂರು ಹೋಬಳಿಗಳಿಗೆ ತಲಾ 2 ಸ್ಥಾನ, ನಗರಕ್ಕೆ 1 ಸ್ಥಾನವನ್ನು ಹಂಚಿಕೆ ಮಾಡಿ ಮೀಸಲಿಡುವುದು. ಆಡಳಿತ ಮಂಡಳಿಯ ಎ ತರಗತಿಯ 6 ಸದಸ್ಯ ಸ್ಥಾನಗಳನ್ನೂ ಹೋಬಳಿವಾರು ಸಮನಾಗಿ ವಿಂಗಡಣೆ ಮಾಡುವ ವಿಚಾರ ಪ್ರಸ್ತಾಪಿಸಿಲಾಯಿತು. ಈ ವೇಳೆ ನಿರ್ದೇಶಕರು ಹಾಗೂ ಸದಸ್ಯರ ನಡುವೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿ ಗದ್ದಲ ಆರಂಭವಾಯಿತು.
ತಾಲೂಕಿನ ಇತರೆ ಹೋಬಳಿಗಳಿಗೆ ಹೋಲಿಕೆ ಮಾಡಿದರೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಸದಸ್ಯರಿದ್ದಾರೆ. ಹೀಗಾಗಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಸಂಘದ ಆಡಳಿತ ಮಂಡಳಿಯ 3 ಸ್ಥಾನಗಳನ್ನು ಕಸಬಾ ಹೋಬಳಿಗೆ ಮೀಸಲಿರಿಸಿರುವುದು ಸರಿಯಾಗಿದೆ. ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಹಲವರು ಪಟ್ಟು ಹಿಡಿದಿದ್ದು ಗದ್ದಲಕ್ಕೆ ಕಾರಣವಾಯಿತು.
ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ತಾಲೂಕನ್ನು ಪ್ರತಿನಿಧಿಸುವುದರಿಂದ ಸದಸ್ಯರನ್ನು 3 ಹೋಬಳಿಗೆ ಸಮಾನವಾಗಿ ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಮುಕ್ತವಾಗಿ ಅಭಿಪ್ರಾಯ ತಿಳಿಸಬೇಕೇ ಹೊರತು ಸಭೆಯಲ್ಲಿ ಕೆಟ್ಟ ಶಬ್ದ ಬಳಕೆ ಮಾಡಿ ಗಲಾಟೆ ಮಾಡುವುದು ಬೇಸರದ ಸಂಗತಿ ಎಂದು ಸದಸ್ಯ ಕೇಶವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಕೆ.ಆರ್.ಗುರುಪ್ರಕಾಶ್ ಮಾತನಾಡಿ, ಸಂಘದ ಆಡಳಿತ ಮಂಡಳಿಯ ಬಿ ತರಗತಿ ಸದಸ್ಯರನ್ನು ತಾಲೂಕಿನ 3 ಹೋಬಳಿಗೆ ಮೀಸಲಾತಿ ಅನುಗುಣವಾಗಿ ನಿಗದಿಪಡಿಸುವ ಬಗ್ಗೆ ನಿರ್ದೇಶಕರ ಮಂಡಳಿಯ ತುರ್ತು ಸಭೆಯಲ್ಲಿ ಚರ್ಚಿಸಲಾಗಿತ್ತು, ಇದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದ್ದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ವಾರ್ಷಿಕ ಸಭೆಯಲ್ಲಿ ಮಂಡಿಸಲಾಗಿತ್ತು. ಸರ್ವ ಸದಸ್ಯರ ತೀರ್ಮಾನದಂತೆ ಎ ತರಗತಿಯ 6 ಸ್ಥಾನಗಳನ್ನು ಸಹಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಹಂಚಿಕೆ ಮಾಡಲಾಗುವುದು ಎಂದು ಗದ್ದಲಕ್ಕೆ ತೆರೆ ಎಳೆದರು.
ಸಭೆ ತೀರ್ಮಾನ: ಕೊನೆಗೆ ಸಂಘದ ಆಡಳಿತ ಮಂಡಳಿಯ ಬಿ ತರಗತಿಯಲ್ಲಿ 7 ನಿರ್ದೇಶಕರ ಸ್ಥಾನಗಳ ಪೈಕಿ ಪಟ್ಟಣ ಮತ್ತು ಕಸಬಾ ಹೋಬಳಿಗೆ ಸೇರಿ 3, ಸೋಂಪುರ 2 ತ್ಯಾಮಗೊಂಡ್ಲು 2 ಸ್ಥಾನ ಮೀಸಲಾತಿ ಅನುಗುಣವಾಗಿ ಹಂಚಿಕೆ ಮಾಡುವುದು. ಎ ತರಗತಿಯಲ್ಲಿನ 6 ಸ್ಥಾನಗಳ ಪೈಕಿ ಪ್ರತಿ ಹೋಬಳಿಗೆ 2 ಸ್ಥಾನ ಹಂಚಿಕೆ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಿ ಅನುಮೋದಿಸಲಾಯಿತು.
ಸಂಘದ ಉಪಾಧ್ಯಕ್ಷೆ ಎಚ್.ಎಂ.ಸಿಂಧು, ನಿರ್ದೇಶಕ ಬಿ.ಎಚ್.ಶಿವರಾಮಯ್ಯ, ಡಿ.ಜೆ.ಜಗಜ್ಯೋತಿ ಬಸವೇಶ್ವರ, ಎ.ಪಿಳ್ಳಪ್ಪ, ಜಿ.ಸಂಪತ್, ಬಿ.ಎನ್.ನರಸಿಂಹಮೂರ್ತಿ, ನಾಗಭೂಷಣ್, ಟಿ.ಎಸ್.ಮೋಹನ್‌ಕುಮಾರ್, ಪಿ.ವೀರಮಾರೇಗೌಡ, ಜಿ.ಮಂಜುಳ, ಹನುಮಂತಯ್ಯ, ಮಹಮದ್ ಸಿರಾಜ್ ಅಹಮ್ಮದ್, ಸಹಕಾರ ಅಭಿವೃದ್ಧಿ ಅಧಿಕಾರಿ ಆರ್.ರಾಮಾಂಜನೇಯ, ವಕೀಲ ಕೇಶವ್‌ಮೂರ್ತಿ, ಸುರೇಶ್ ಶ್ರೀನಿವಾಸ್, ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಹರೀಶ್‌ಬಾಬು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್, ಮುಖಂಡ ದೇಗನಹಳ್ಳಿ ಸುರೇಶ್, ಹನುಮೇಗೌಡ, ಬಿ.ರಾಜಣ್ಣ ಇದ್ದರು.