

ಮೈಸೂರು: ರಾಜ್ಯ ಕಾಂಗ್ರೆಸ್ ಡಿಎಂಕೆಯ ‘ಬಿ ಟೀಮ್’ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಎಐಎಡಿಎಂಕೆ ಬಿಜೆಪಿಯೊಂದಿಗೆ ಇತ್ತಲ್ಲ ಆಗ ಅದು ಯಾವ ಟೀಂ ಆಗಿತ್ತು? ಸುಮ್ಮನೆ ರಾಜಕೀಯ ಕಾರಣಕ್ಕೆ ಎನೇನೋ ಹೇಳಿಕೆ ಕೊಡಬಾರದು ಎಂದು ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ 9 ವರ್ಷಗಳ ಕಾಲ ನುಡಿದಂತೆ ನಡೆದಿಲ್ಲ. ಹೀಗಾಗಿ ದೇಶದಲ್ಲಿ ಬಿಜೆಪಿ ವಿರುದ್ಧವಾದ ಶಕ್ತಿಗಳು ಒಗ್ಗೂಡುತ್ತಿವೆ. ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಸಮಾಜ ಒಡೆಯುವ ಕಾರ್ಯ ಮಾಡಿದರು. ಈ ಸತ್ಯ ಗೊತ್ತಾದ ಮೇಲೆ ಅನೇಕ ಶಕ್ತಿಗಳು ಬಿಜೆಪಿಯೇತರ ಗುಂಪಿನಲ್ಲಿ ಸೇರಿಕೊಂಡಿವೆ ಎಂದರು.
ಚುನಾವಣೆಗೋಸ್ಕರ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಿತು. ಈ ಮಸೂದೆ ಮುಂದಿನ ಬಾರಿಯ ಲೋಕಸಭೆ ಚುನಾವಣೆಗೆ ಜಾರಿಗೆ ಬರುವುದಿಲ್ಲ. ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದಿದ್ದರೆ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಡಿ ಲಿಮಿಟೇಷನ್ ಮಾಡಿ ಮಹಿಳೆಯರಿಗೆ ಮೀಸಲಾತಿ ನೀಡಲಿ. ಮತ ಪಡೆಯುವ ಏಕೈಕ ಉದ್ದೇಶದಿಂದ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬುದೆಲ್ಲ ಸುಳ್ಳು. ಈ ಹಿಂದೆಯೂ ನಾನು ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಭೇಟಿ ನೀಡಿ 5 ವರ್ಷ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿಯಾದವರು ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಅಪವಾದ ನನ್ನ ಭೇಟಿಯಿಂದ ದೂರವಾಗಿದೆ. ಚಾಮರಾಜನಗರಕ್ಕೆ ಭೇಟಿ ನೀಡಿದರೂ ನಾನು ಗಟ್ಟಿಯಾಗಿದ್ದೇನೆ, ಆದರೆ ನೀವು (ಮಾಧ್ಯಮ) ವೀಕ್ ಮಾಡಲು ಪ್ರಯತ್ನ ನಡೆಸುತ್ತಿದ್ದೀರ ಎಂದರು.