

ಚಿಕ್ಕೋಡಿ: ಕೃಷ್ಣಾ ನದಿ ತೀರದಲ್ಲಿ ಪ್ರವಾಹ ನಿಯಂತ್ರಣ ಮಾಡಲು ಶಾಶ್ವತವಾದ ಕರ್ನಾಟಕ-ಮಹಾರಾಷ್ಟ್ರ ಮೇಲುಸ್ತುವಾರಿ ಸಮಿತಿ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹಿಸಿದರು.
ತಾಲೂಕಿನ ಮಾಂಜರಿ ಹಾಗೂ ಇಂಗಳಿ ಪ್ರವಾಹ ಪೀಡಿತ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಬಳಿಕ ಇಂಗಳಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ದೂರಾಗಲು ದಿಗ್ಗೇವಾಡಿ ಸೇತುವೆ (ಬ್ಯಾರೇಜ್) ಕಾಮಗಾರಿ ಶೀಘ್ರವಾಗಿ ಪೂರ್ಣವಾಗಬೇಕು ಎಂದರು.
ಕೆಆರ್‌ಐಡಿಎಲ್ ಯೋಜನೆಯಲ್ಲಿ ಮಂಜೂರಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ ಗ್ರಾಮಗಳ ಮಧ್ಯ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ, ಕೂಡು ರಸ್ತೆಗೆ 2018ರಲ್ಲಿ ಟೆಂಡರ್ ನೀಡಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಡಿಸೆಂಬರ್-2024 ಗಡುವು ನೀಡಿದ್ದಾರೆ.
ಆದರೆ, ಇಲ್ಲಿಯವರೆಗೆ ಶೇ.72 ಮಾತ್ರ ಪೂರ್ಣಗೊಂಡಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜುಗುಳ-ಚಿದ್ರಾಪುರ ಗ್ರಾಮಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಟೆಂಡರ್ ಸಹ 2018ರಲ್ಲಿ ನೀಡಿದ್ದು, ಇದಕ್ಕೆ ಗುತ್ತಿಗೆದಾರರಿಗೆ ಅಕ್ಟೋಬರ್-2024ರ ಗಡುವು ನೀಡಲಾಗಿದೆ. ಇಲ್ಲಿಯವರೆಗೆ ಶೇ.84 ಕಾಮಗಾರಿ ಪೂರ್ಣಗೊಂಡಿದೆ ಎಂದರು. ಈ ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಪವನ ಮಹಾಜನ, ಸಂಜು ಪಾಟೀಲ, ಅಜಿತ ದೇಸಾಯಿ, ಮಹಾವೀರ ಕಾತ್ರಾಳೆ, ಅಮರ ಯಾಧವ, ಅಣ್ಣಾಸಾಹೇಬ ಇಂಗಳೆ, ಸುನೀಲ ಪಾಟೋಳೆ ಇತರರು ಇದ್ದರು.