

ಶಿವಮೊಗ್ಗ: ವಿಧಾನಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಪಕ್ಷೇತರನಾಗಿ ಕಣಕ್ಕಿಳಿಯಬೇಕಾಯಿತು. ನಾನು ಗೆದ್ದರೂ ಕಾಂಗ್ರೆಸ್, ಸೋತರೂ ಕಾಂಗ್ರೆಸಿಗನಾಗಿಯೇ ಇರುತ್ತೇನೆ ಎಂದು ಆ ಸಂದರ್ಭದಲ್ಲೇ ಹೇಳಿದ್ದೆ. ಅದರಂತೆಯೇ ಇಂದು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ ಎಂದು ಶಿಕಾರಿಪುರದ ನಾಗರಾಜ ಗೌಡ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 70 ಸಾವಿರ ಮತ ಗಳಿಸಿ ಎರಡನೇ ಸ್ಥಾನ ಪಡೆದಿದ್ದೆ. ಆ.24ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದೆ ಎಂದರು.
ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಚುನಾವಣೆ ಸಂದರ್ಭದಲ್ಲಿ ನಿಮ್ಮ ವಿರುದ್ಧ ಕೆಲಸ ಮಾಡಿದವರನ್ನೂ ವಿಶ್ವಾಸಕ್ಕೆ ಪಡೆದು ಕ್ಷೇತ್ರದಲ್ಲಿ ಪಕ್ಷವನ್ನು ಬಲಗೊಳಿಸಬೇಕು. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ವಿಶ್ವಾಸಗಳಿಸಿ. ಇಲ್ಲವಾದರೆ ಈ ಬಾರಿ ಬಿಜೆಪಿ ವಿರುದ್ಧ ಅಲ್ಪ ಮತದಲ್ಲಿ ಸೋತಂತೆ ಮುಂದಿನ ದಿನಗಳಲ್ಲೂ ಅದೇ ಫಲಿತಾಂಶ ಮರುಕಳಿಸಬಹುದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್ ಅವರು ಸದಸ್ಯತ್ವ ನೀಡಿ ಬರಮಾಡಿಕೊಂಡರು. ಮಾಜಿ ಸಂಸದ ಆಯನೂರು ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಚಂದ್ರಭೂಪಾಲ, ಜಿ.ಡಿ.ಶಿವಾನಂದ, ನಾಗರಾಜ ನಾಯ್ಕ ಇತರರಿದ್ದರು.