ಎತ್ತ ನೋಡಿದರೂ ಸುತ್ತೂರು ಜಾತ್ರೆ ಸಂಭ್ರಮ

Suttur
Published on

| ಪ್ರಶಾಂತ ರಿಪ್ಪನ್​ಪೇಟೆ

ಯಾವುದೇ ಜಾತ್ರೆ, ಉತ್ಸವಗಳಾದರೂ ಸಮಾಜದ ಸಂಘಟನೆ, ಸಾಂಸ್ಕೃತಿಕ ಏಕತೆ ಹಾಗೂ ಸಾಮಾಜಿಕ ಜಾಗೃತಿಗೆ ನಾಂದಿಯಾಗಬೇಕು. ಈ ಹಿನ್ನೆಲೆಯಲ್ಲಿ ಜಾತ್ರೆ, ರಥೋತ್ಸವದಂತಹ ಧಾರ್ವಿುಕ ಉತ್ಸವಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಕೀರ್ತಿ ಸುತ್ತೂರು ಶ್ರೀ ವೀರಸಿಂಹಾಸನ ಮಠಕ್ಕೆ ಸಲ್ಲುತ್ತದೆ. ಮೈಸೂರು ಜಿಲ್ಲೆಯ ಸುಪ್ರಸಿದ್ಧ ಸುತ್ತೂರು ಮಠದ ಜಾತ್ರಾ ಮಹೋತ್ಸವವು ಧಾರ್ವಿುಕ ಆಚರಣೆಗೆ ಸೀಮಿತವಾಗದೆ; ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಹಾ ಉತ್ಸವವಾಗಿ ಜಾಗತಿಕ ಗಮನ ಸೆಳೆದಿದೆ.

ಸುತ್ತೂರು ಮಠದ ಜಾತ್ರೆ ಎಂದರೆ ಜಾತಿ, ಮತ, ಪಂಥ, ಪ್ರದೇಶವೆಂಬ ಬೇಧವಿಲ್ಲ. ಅದು ಏಕತಾ ಭಾವ ಅನಾವರಣದ ಆದ್ಯ ವೇದಿಕೆಯಾಗಿರುತ್ತದೆ. ದೇಶ, ಧರ್ಮ, ಸಂಸ್ಕೃತಿ, ಕೃಷಿ... ಹೀಗೆ ಎಲ್ಲ ದೃಷ್ಟಿಕೋನದಲ್ಲೂ ಸಮೃದ್ಧ ಉತ್ಸವ. ಜಾತ್ರೆಗೆ ಸೇರುವ ಜನಸಂಖ್ಯೆಯ ದೃಷ್ಟಿಯಲ್ಲಿ ಸುತ್ತೂರು ಜಾತ್ರೆ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಪ್ರಮುಖವಾಗಿದೆ. ಜನತೆಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಂಡ ಅಪರೂಪದ ಜಾತ್ರೆ ಸುತ್ತೂರಿನಲ್ಲಿ ಮೇಳೈಸುತ್ತದೆ.

ಜ.20ಕ್ಕೆ ಮಹಾರುದ್ರಾಭಿಷೇಕ, ಶಿವದೀಕ್ಷೆ, ಮಂತ್ರಮಹರ್ಷಿಗಳ ಸಂಸ್ಮರಣೋತ್ಸವ ಹಾಗೂ ರಥೋತ್ಸವ ಜರುಗುತ್ತದೆ. ಜ.21ಕ್ಕೆ ಮಾಸಶಿವರಾತ್ರಿ ಮಹೋತ್ಸವ, ಮಹಾತ್ಮರ ಚಿತ್ರಪಟ ಉತ್ಸವ, ಜ.22ಕ್ಕೆ ಮಹದೇಶ್ವರ ಕೊಂಡೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಲಕ್ಷದೀಪೋತ್ಸವ ಗ್ರಾಮದೇವತೆಯ ಉತ್ಸವ, ವೀರಭದ್ರೇಶ್ವರ ಕೊಂಡೋತ್ಸವ, ತೆಪ್ಪೋತ್ಸವ ನಡೆಯಲಿವೆ. ಜ.23ರಂದು ಅನ್ನಬ್ರಹ್ಮೋತ್ಸವದೊಂದಿಗೆ ಉತ್ಸವ ಮೂರ್ತಿಗಳನ್ನು ಮರಳಿ ಮಠಕ್ಕೆ ಬಿಜಯಂಗೈಯಿಸಲಾಗುವುದು.

ಜಾತ್ರೆಯ ವ್ಯಾಖ್ಯಾನ ಬದಲಿಸಿದ ಜಗದ್ಗುರು: ಜಾತ್ರೆ ಎಂದರೆ ಸಾಮಾನ್ಯವಾಗಿ ಧಾರ್ವಿುಕ ಆಚರಣೆಗಳು, ಪಾರಂಪರಿಕ ಪದ್ಧತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಸುತ್ತೂರು ಜಾತ್ರಾ ಮಹೋತ್ಸವವು ಹತ್ತು ಹಲವು ಆಯಾಮಗಳಿಂದ ಮಹಾ ಮೇಳವಾಗಿದ್ದು, ಜಾತ್ರೆಯ ವ್ಯಾಖ್ಯಾನವನ್ನು ಬದಲಿಸಿದ ಕೀರ್ತಿ ಸುತ್ತೂರಿನ ಪ್ರಸ್ತುತ ಜಗದ್ಗುರು ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಸುತ್ತೂರು ಮಠದ ಸಂಸ್ಥಾಪನಾಚಾರ್ಯ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವದ ನೆಪದಲ್ಲಿ ಸಾಮಾಜಿಕ ದೃಷ್ಟಿಕೋನದ ಪರಿಲ್ಪನೆಗಳು ಜಾತ್ರೆಯಲ್ಲಿ ಅನಾವರಣಗೊಳ್ಳುತ್ತವೆ.

ಪ್ರತಿವರ್ಷದಂತೆ ಪುಷ್ಯ ಮಾಸದ ಬಹುಳದಂದು ಆರಂಭವಾಗುವ ಜಾತ್ರೆ ಈ ವರ್ಷ ಜ.18ರಂದು ಆರಂಭವಾಗಿದೆ. ಜ.23 ರವರೆಗೆ ಒಟ್ಟು 6 ದಿನಗಳ ಜಾತ್ರೆಯಲ್ಲಿ, ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಆರಂಭಿಸಿದ ಜನಪದ ಪೋ›ತ್ಸಾಹವನ್ನು ಇಂದಿಗೂ ಮುಂದುವರಿಸಲಾಗಿದೆ. ಸೋಬಾನೆ ಪದ ಸ್ಪರ್ಧೆ, ರಾಜ್ಯಮಟ್ಟದ ಭಜನಾ ಮೇಳ, ರಂಗೋಲಿ ಸ್ಪರ್ಧೆ, ದೇಸೀ ಆಟಗಳ ಸ್ಪರ್ಧೆ, ಕುಸ್ತಿ ಪಂದ್ಯ, ಆರೋಗ್ಯ ಶಿಬಿರ, ವಸ್ತುಪ್ರದರ್ಶನ, ವಿವಿಧ ಪುಸ್ತಕ ಬಿಡುಗಡೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜಾತ್ರೆಯಲ್ಲಿ ನಡೆಯಲಿವೆ. ಬಹುದೊಡ್ಡ ರೈತ ಸಮುದಾಯದ ಅನುಕೂಲಕ್ಕಾಗಿ ದೇಶದಲ್ಲೇ ಪ್ರಸಿದ್ಧವಾದ ಕೃಷಿಮೇಳ ಆಯೋಜನೆಯು ಸುತ್ತೂರು ಜಾತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆ. ಮಿಶ್ರ ಬೆಳೆ ಪ್ರಾತ್ಯಕ್ಷಿಕೆಗಳು ರೈತ ಸಮುದಾಯಕ್ಕೆ ಉತ್ತಮ ಮಾಹಿತಿ ನೀಡಿದರೆ; ಕೃಷಿ ಮತ್ತು ಸಿರಿಧಾನ್ಯಗಳ ಕುರಿತು ಆಯೋಜಿಸುವ ವಿಚಾರ ಸಂಕಿರಣಗಳಿಂದ ಕೃಷಿಕ್ರಾಂತಿಗೆ ಸಹಕಾರಿಯಾಗಿವೆ. ಈ ಎಲ್ಲ ಸ್ಪರ್ಧೆಗಳಲ್ಲಿ ನೂರಾರು ತಂಡಗಳು ಪಾಲ್ಗೊಂಡರೆ; ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ನಾಡಿನ ಮುಖ್ಯಮಂತ್ರಿಗಳನ್ನು ಮೊದಲ್ಗೊಂಡು ಹಲವಾರು ಮಂತ್ರಿಗಳು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಸುತ್ತೂರು ಮಠದ ಪರಂಪರೆ : ಸುತ್ತೂರು ವೀರಸಿಂಹಾಸನ ಮಠಕ್ಕೆ ಸುಮಾರು ಸಾವಿರ ವರ್ಷದ ಇತಿಹಾಸವಿದೆ. 10ನೇ ಶತಮಾನದಲ್ಲಿ ಶ್ರೀ ಜಗದ್ಗುರು ಶಿವರಾತ್ರೀಶ್ವರರು ಕಪಿಲಾನದಿಯ ದಂಡೆಯ ಮೇಲೆ ತಪಸ್ಸು ಮಾಡುತ್ತಿದ್ದರು. ಈ ವೇಳೆ ಇದೇ ಮಾರ್ಗವಾಗಿ ತಲಕಾಡಿನ ಗಂಗರ ಮೇಲೆ ಯುದ್ಧಕ್ಕೆ ಬಂದ ಚೋಳ ದೊರೆಯ ಕುದುರೆ ಶಿವರಾತ್ರೀಶ್ವರರು ಕುಳಿತಿದ್ದ ಸ್ಥಳದಲ್ಲಿ ಸುತ್ತುಹಾಕುತ್ತದೆ. ಈ ಕಾರಣದಿಂದ ಈ ಊರಿಗೆ ಸುತ್ತೂರು ಎಂಬ ಹೆಸರು ಬಂದಿದೆ. ಚೋಳರಾಜನಿಗೆ ಶಿವರಾತ್ರೀಶ್ವರರು ತಪಸ್ಸಿಗೆ ಕುಳಿತಿರುವುದು ತಿಳಿದು ಗುರುಗಳ ದರ್ಶನ ಮಾಡುತ್ತಾನೆ. ಆಗ ಶಿವರಾತ್ರೀಶ್ವರರು ಗಂಗರಾಜರನ್ನು ಕರೆಯಿಸಿ ಈರ್ವರಿಗೆ ಸಂಧಾನವನ್ನು ಮಾಡಿ ಆಗಬಹುದಾದ ಸಂಘರ್ಷವನ್ನು ತಪ್ಪಿಸುತ್ತಾರೆ. ಇದರಿಂದ ಸಂತಸಗೊಂಡ ಚೋಳರಾಜನು ಶಿವರಾತ್ರೀಶ್ವರರಿಗೆ ಇಲ್ಲಿಯೇ ನೆಲೆನಿಲ್ಲುವಂತೆ ವಿನಂತಿಸಿ ಸೋಮೇಶ್ವರ ದೇವಾಲಯವನ್ನು ಕಟ್ಟಿಸಿ ಕೊಟ್ಟಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ. ಮುಂದೆ ಶಿವರಾತ್ರೀಶ್ವರರು ಇಲ್ಲಿ ಮಠವನ್ನು ಸ್ಥಾಪಿಸುತ್ತಾರೆ. ನಂತರ ಈಶಾನ್ಯೇಶ್ವರರಿಗೆ ಉತ್ತರಾಧಿಕಾರಿ ಪಟ್ಟ ಕಟ್ಟಿ ತಾವು ಶಿವಯೋಗದಲ್ಲಿ ಲೀನವಾಗುತ್ತಾರೆ. ಅಂದಿನಿಂದ ಆರಂಭವಾದ ಸುತ್ತೂರು ಮಠದ ಗುರುಪರಂಪರೆಯಲ್ಲಿ ಇಲ್ಲಿಯವರೆಗೆ 23 ಜನ ಜಗದ್ಗುರುಗಳು ಆಗಿ ಹೋಗಿದ್ದು, ಪ್ರಸ್ತುತ ಇರುವ ಶ್ರೀಗಳು 24ನೇಯವರು. ಅವರ ಉತ್ತರಾಧಿಕಾರಿಯನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.

ಸುತ್ತೂರು ಮಠವು ಹಲವು ಶರಣರು, ಸಂತರು, ಶಿವಯೋಗಿಗಳಿಗೆ ತಪೋಭೂಮಿಯಾಗಿದ್ದು, ಕಲ್ಯಾಣ ಕ್ರಾಂತಿಯ ನಂತರ ದಿಕ್ಕಾಪಾಲಾದ ಶರಣರಿಗೆ ಆಶ್ರಯ ತಾಣವಾಗಿತ್ತು. 15ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗೇಶ್ವರರು, ಮಲೆಮಹದೇಶ್ವರ ಸ್ವಾಮಿಗಳು ಕೂಡಾ ಸುತ್ತೂರಿನಲ್ಲಿ ಅನುಷ್ಠಾನ ಮಾಡಿದ ಉಲ್ಲೇಖಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net