

ಬೆಳಗಾವಿ: ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯಗಳಿಲ್ಲದೆ ಅಲ್ಲಲ್ಲಿ ಉಳಿದುಕೊಂಡಿರುವ ಬಡವರು, ಕೂಲಿ ಕಾರ್ಮಿಕರು ಹಾಗೂ ಇನ್ನಿತರರು ಸಮೀಪದಲ್ಲೇ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಪಡೆಯಬಹುದಾಗಿದೆ.
21 ದಿನಗಳ ಕಾಲ ಲಾಕ್‌ಡೌನ್ ಇರುವುದರಿಂದ ಕಟ್ಟಡ ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕರು ಸಾರಿಗೆ ಸೌಲಭ್ಯ ಇಲ್ಲದ್ದರಿಂದ ನಡೆದುಕೊಂಡೇ ತಮ್ಮ ಊರುಗಳತ್ತ ಬರುತ್ತಿದ್ದಾರೆ. ಕೆಲವರು ಅಡ್ಡ ದಾರಿಗಳ ಮೂಲಕ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಕೆಲ ಕುಟುಂಬಗಳಿಗೆ ಊರಿಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿಯೇ ಉಳಿದುಕೊಂಡಿದ್ದಾರೆ. ಅಂತಹ ಕುಟುಂಬಗಳು ತಮ್ಮ ಸಮೀಪದಲ್ಲೇ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ ಅಥವಾ ತಮ್ಮ ಮೊಬೈಲ್‌ಗೆ ಬಂದ ಒಟಿಪಿ ನಂಬರ್ ತೋರಿಸಿ ಪಡಿತರ ಪಡೆದುಕೊಳ್ಳಬಹುದು.
ಈಗಾಗಲೇ ಸರ್ಕಾರವು ಬಿಪಿಎಲ್, ಅಂತ್ಯೋದಯ ಪಡಿತರದಾರರ ಎಲ್ಲ ಕುಟುಂಬಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಅಕ್ಕಿ ನೀಡುತ್ತಿದೆ. ಜತೆಗೆ 2 ಕೆ.ಜಿ. ಗೋಧಿಯನ್ನೂ ಉಚಿತವಾಗಿ ನೀಡುತ್ತಿದೆ. ಈ ಸೌಲಭ್ಯದಿಂದ ಕಾರ್ಮಿಕರು, ಬಡವರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಒಂದು ಜಿಲ್ಲೆಯ ವಿಳಾಸದಲ್ಲಿ ಪಡಿತರ ಚೀಟಿ ಪಡೆದಿರುವವರು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ನಿರಾಕರಿಸುವಂತಿಲ್ಲ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರು ಪಡಿತರ ಚೀಟಿ ಜತೆಗೆ ಒಟಿಪಿ ತೋರಿಸಿದರೆ ಅವರಿಗೆ ತಕ್ಷಣವೇ ಪಡಿತರ ಧಾನ್ಯ ನೀಡಬೇಕು. ಯಾವುದೇ ಕಾರಣಕ್ಕೂ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿಕಾರರು ಹೇಳುವಂತಿಲ್ಲ. ಅವರಿಗೆಲ್ಲ ನಿಯಮದ ಪ್ರಕಾರ ಆಹಾರ ಧಾನ್ಯ ನೀಡಬೇಕು ಎಂದು ಸೂಚಿಸಲಾಗಿದೆ.
ಇಂಟರ್‌ನೆಟ್ ಸೇರಿ ಇನ್ನಿತರ ಸೌಲಭ್ಯಗಳ ಕೊರತೆಯಿಂದ ಜಿಲ್ಲೆಯಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳು ಪಿಒಎಸ್ ಯಂತ್ರ (ಪಾಯಿಂಟ್ ಆಫ್ ಸೇಲ್) ಸೌಲಭ್ಯ ಹೊಂದಿಲ್ಲ. ಅಂತಹ ಅಂಡಿಗಳಲ್ಲಿ ಮ್ಯಾನ್ಯುವಲ್ ಪದ್ಧತಿ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಅಂಗಡಿಕಾರರಿಗೆ ಸೂಚನೆ ನೀಡಲಾಗಿದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಚೀಟಿ ಹೊಂದಿರುವ ಕುಟುಂಬಗಳು ದೇಶದ ಯಾವುದೇ ಭಾಗಕ್ಕೆ ವಲಸೆ ಹೋದರೂ ಆಹಾರ ಭದ್ರತೆ ಖಾತರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆ ಇದೀಗ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗಿದೆ. ಈಗಾಗಲೇ ಪ್ರತಿ ತಿಂಗಳು ಊರಿಗೆ ಹೋಗಿ ಪಡಿತರ ಧಾನ್ಯ ತೆಗೆದುಕೊಂಡು ಬರುತ್ತಿದ್ದೆವು. ಇದೀಗ ಲಾಕ್‌ಡೌನ್‌ನಿಂದ ಬಸ್ ಸೌಲಭ್ಯ ಇಲ್ಲದೆ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಪಡಿತರ ಧಾನ್ಯಗಳನ್ನು ಇಲ್ಲಿಯೇ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿರುವುದು ಅನುಕೂಲವಾಗಿದೆ ಎಂದು ಕಟ್ಟಡ ಕಾರ್ಮಿಕರಾದ ಪರಶುರಾಮ ಭಜಂತ್ರಿ, ಸಾವಿತ್ರಿ ಎಸ್.ಪರಿಕಟ್ಟಿ ತಿಳಿಸಿದ್ದಾರೆ.
ಪಡಿತರ ಚೀಟಿ ಹೊಂದಿರು ವವರು ಎಲ್ಲಿ ಬೇಕಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಧಾನ್ಯ ಪಡೆದುಕೊಳ್ಳಬಹುದು. ಪಿಒಎಸ್ ಸೌಲಭ್ಯ ಇಲ್ಲದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಮ್ಯಾನ್ಯುವಲ್ ಮೂಲಕ ಪಡಿತರ ಧಾನ್ಯ ನೀಡಲಾಗುತ್ತಿದೆ.| ಚನ್ನಬಸಪ್ಪ ವೆಂ.ಕೊಡ್ಲಿ ಜಂಟಿ ನಿರ್ದೇಶಕ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ