ರಸ್ತೆ ಸರಿಪಡಿಸುತ್ತೇವೆ ಎಂದವರು ಎಲ್ಲಿ?

21, srinivaspur photo-1
ಕೆಸರು, ಗುಂಡಿಮಯವಾಗಿರುವ ಶ್ರೀನಿವಾಸಪುರ ತಾಲೂಕಿನ ಗಂಗನಹಳ್ಳಿಯ ಮಣ್ಣಿನ ರಸ್ತೆ.
Published on

ಗಂಗನಹಳ್ಳಿ ಗ್ರಾಮಸ್ಥರ ಆಕ್ರೋಶ - ವರ್ಷಗಳೇ ಕಳೆದರು ಬಗೆಹರಿಯದ ಸಮಸ್ಯೆ

ಶ್ರೀನಿವಾಸಪುರ :ಪ್ರತಿ ನಿತ್ಯ ಸಂಚರಿಸುವ ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ವಾಹನ ಸವಾರರು, ಸಾರ್ವಜನಿಕರು ಓಡಾಡಲು ಹೈರಾಣಾಗುತ್ತಿದ್ದಾರೆ. ಸುಮಾರು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಪೆಟ್ಟು ತಿಂದ ನಿದರ್ಶನಗಳು ಬಹಳಷ್ಟಿವೆ.

ತಾಲೂಕಿನ ಚಲ್ದಿಗಾನಪಲ್ಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಒಟ್ಟು 15 ಮನೆಗಳಿದ್ದು, ಸುಮಾರು 80 ಜನ ವಾಸವಿದ್ದಾರೆ. ಈ ಗ್ರಾಮಕ್ಕೆ ಸುಗಮವಾದ ರಸ್ತೆಯಿಲ್ಲದೆ ಜನ ಜೀವನ ಅಸ್ತವ್ಯಸ್ತವಾಗಿದೆ. ಜನಪ್ರತಿನಿಧಿಗಳು ಕೇವಲ ಚುನಾವಣೆ ವೇಳೆ ಈ ಹಳ್ಳಿಯನ್ನು ಹುಡುಕಿಕೊಂಡು ಬರುತ್ತಾರೆ. ರಸ್ತೆ ಸಮಸ್ಯೆ ಕೇಳಿದರೆ ಸರಿಪಡಿಸುತ್ತೇವೆ ಎಂಬ ಆಶ್ವಾಸನೆಯನ್ನೂ ನೀಡುತ್ತಾರೆ. ಚುನಾವಣೆ ಮುಗಿದ ನಂತರ ಇತ್ತ ನೋಡುವುದೇ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು ವರ್ಷಗಳಿಂದ ಈ ಹಳ್ಳಿಯ ಮಾರ್ಗವಾಗಿ ಹಾದು ಹೋಗುವ ವಾಹನ ಸವಾರರು ಹಾಗು ಗ್ರಾಮಸ್ಥರ ಪರಸ್ಥಿತಿ ಕೇಳುವವರಿಲ್ಲದಂತಾಗಿದೆ. ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಗ್ರಾಮೀಣ ಭಾಗಗಳ ರಸ್ತೆಯತ್ತ ಗಮನಹರಿಸಿಲ್ಲ. ಮಳೆಗಾಲ ಆರಂಭವಾಗಿದ್ದು, ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡು, ಗುಂಡಿಗಳ ಆಳ ಗೊತ್ತಾಗದೆ ಬಿದ್ದು ಪೆಟ್ಟು ತಿಂದವರೇ ಹೆಚ್ಚು. ಶಾಸಕರು ಪಿಡಬ್ಲೂಡಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಸಮಸ್ಯೆ ಬಗೆಹರಿಸಲು ಆದೇಶಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರಾದ ವೆಂಕಟೇಶಪ್ಪ, ಶಿವು, ಕೆಂಪಣ್ಣ, ಮುನಿಶಾಮಿ, ಬಾಬು, ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

ಶಾಸಕ ಜಿ.ಕೆ.ವೆಂಕಟ ಶಿವಾರೆಡ್ಡಿ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಾಗ ಗೆದ್ದ ಮೇಲೆ ರಸ್ತೆ ಸರಿ ಮಾಡಿ ಕೊಡುತ್ತೇನೆ ಅಂತ ಹೇಳಿ ಹೋದವರು ಗೆಲುವು ಸಾಧಿಸಿ ಎರಡು ವರ್ಷಗಳೇ ಕಳೆದರೂ ಇತ್ತ ಸುಳಿದಿಲ್ಲ. -ಮೋಹನ್​ಬಾಬು, ಗಂಗನಹಳ್ಳಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net