

ಹುಬ್ಬಳ್ಳಿ: ಮಾದಕ ದ್ರವ್ಯ ಪೆಡಲರ್ಸ್ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿರುವ ಹು-ಧಾ ಪೊಲೀಸ್ ಆಯುಕ್ತಾಲಯವು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿನೂತನವಾಗಿ ಜಾಗೃತಿ ಮೂಡಿಸಲಾರಂಭಿಸಿದೆ.
ಕಳೆದ ಒಂದು ತಿಂಗಳಲ್ಲಿ ಹು-ಧಾ ಅವಳಿ ನಗರದಲ್ಲಿ 850ಕ್ಕೂ ಹೆಚ್ಚು ಜನ ಮಾದಕ ವಸ್ತುಗಳ ಬಳಕೆದಾರರನ್ನು ವಶಪಡಿಸಿಕೊಂಡು ತಪಾಸಣೆ ಮಾಡಲಾಗಿದೆ. 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 12 ಡ್ರಗ್ ಪೆಡಲರ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, 66 ಜನರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಇದರ ಮಧ್ಯೆಯೂ ಸಾಮಾಜಿಕ ಜಾಲತಾಣದಲ್ಲಿ ಕೊಲಂಬಿಯಾದ ಮಾದಕ ದ್ರವ್ಯ ಮಾರಾಟ ದೊರೆ ಪ್ಯಾಬ್ಲೋ ಎಸ್ಕೋಬಾರ್ ಹೆಸರು ಹರಿಬಿಟ್ಟು ಎಚ್ಚರಿಕೆ ನೀಡಲಾಗುತ್ತಿದೆ. ‘ನಿನ್ನನ್ನು ನೀನು ಪ್ಯಾಬ್ಲೋ ಎಸ್ಕೋಬಾರ್ ಎಂದು ತಿಳಿದು ಮೆರೆಯಬೇಡ. ಕಂಬಿ ಹಿಂದೆ ಇರುತ್ತಿಯಾ ಮರೆಯಬೇಡ’ ಎಂದು ಸ್ಲೋಗನ್ ಹೇಳಿ ಎಚ್ಚರಿಕೆ ನೀಡಿದೆ.
ಐರನ್ ಮ್ಯಾನ್ ಮಾತು: ‘ಹು-ಧಾ ಮಂದಿಗಿ ನಮಸ್ಕಾರ್ರೀ...ನಾ ಐರನ್ ಮ್ಯಾನ್ ಆಗಿದ್ರೂ ನನ್ ತಲಿ ಸೇಫ್ಟಿಗೆ ಯಾವಾಗಲೂ ಹೆಲ್ಮೆಟ್ ಹಾಕ್ಕೊಳೋದು ಮರಿಯುವುದಿಲ್ಲ...ಮತ್ತ ನೀವ್ ಯಾಕ್ ಮರಿತೀರಿ ಪಾ...? ಬೈಕ್ ಹೊಡಿಯುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಕ್ಕೊಳ್ರೀ...’ಎಂಬುದನ್ನು ‘ಐರಾನ್ ಮ್ಯಾನ್’ ಹೇಳುತ್ತಿರುವಂತೆ ಚಿತ್ರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅವಳಿ ನಗರದ ಜನರಿಗೆ ವಿನೂತನ ಜಾಗೃತಿ ಸಂದೇಶ ರವಾನಿಸಲಾಗುತ್ತಿದೆ.