ಭಕ್ತಿಯಿಂದ ಪೂಜಿಸಿದಾಗ ಒಳಿತು ಪ್ರಾಪ್ತಿ

16sdp4
Published on

ಸಿದ್ದಾಪುರ: ದೈವಿ ಶಕ್ತಿ ಸದಾಕಾಲ ಇದ್ದೇ ಇರುತ್ತದೆ. ಅದನ್ನು ನಂಬದಿರಲು ಸಾಧ್ಯವೇ ಇಲ್ಲ. ಆ ಶಕ್ತಿಗೆ ಶರಣಾದಾಗ, ಭಕ್ತಿಯಿಂದ ಪೂಜಿಸಿದಾಗ ಅದು ನಮಗೆ ಒಳಿತು ಮಾಡಿಯೇ ಮಾಡುತ್ತದೆ ಎಂದು ಹಿರಿಯ ಅರ್ಚಕ ವೇ. ತಿಮ್ಮಣ್ಣ ಭಟ್ಟ ಹುಲಿಮನೆ ಹೇಳಿದರು.

ಪಟ್ಟಣದ ರವೀಂದ್ರನಗರದ ಅಂಬೇಡ್ಕರ್ ಕಾಲನಿಯ ಶ್ರೀ ನಾಗಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ವರ್ಧಂತಿ ಉತ್ಸವದ ವಾರ್ಷಿಕ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದೇವರಿಂದ ಭಕ್ತರಿಗೆ ಒಳಿತು ಆಗಿಸುವಲ್ಲಿ ಅರ್ಚಕರ ಕಾರ್ಯ ಮುಖ್ಯವಾದದ್ದು. ಈ ಕ್ಷೇತ್ರದ ದೇವತೆಗಳ ಪ್ರತಿಷ್ಠಾಪನೆ ಹಾಗೂ ಆ ನಂತರದಲ್ಲಿ ಅರ್ಚಕನಾಗಿ ನನಗೆ ಭಕ್ತಾದಿಗಳಿಂದ ದೊರೆತ ಸಹಕಾರ ಅವಿಸ್ಮರಣೀಯ. ಈ ಕ್ಷೇತ್ರದ ತಾಯಿಯ ಕೃಪೆಯಿಂದಾಗಿ ನನ್ನ ಶಕ್ತಿ,ತಿಳಿವಳಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಮಹತ್ವದ ಶಕ್ತಿ ಇರುವ ಈ ಕ್ಷೇತ್ರದ ಕುರಿತಾಗಿ ಭಕ್ತರು ಶೃದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ನಮ್ಮ ಸನಾತನ ಧರ್ಮದಲ್ಲಿ ದೈವಿಶಕ್ತಿಗೆ ಬಹುಮುಖ್ಯ ಸ್ಥಾನವಿದೆ. ಅರ್ಚಕ ಶೃದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಆ ಶಕ್ತಿಯ ಪ್ರಭಾವ ಮತ್ತಷ್ಟು ಹೆಚ್ಚುತ್ತದೆ. ದೇವರು ಮತ್ತು ಭಕ್ತರ ನಡುವಿನ ಕೊಂಡಿ ಅರ್ಚಕ. ಭಕ್ತರ ಬೇಡಿಕೆಯನ್ನು ಅರಿತು ದೇವರಲ್ಲಿ ಅದನ್ನು ನಿವೇದನೆ ಮಾಡಿ ಭಕ್ತನಾದವನಿಗೆ ಕೃಪಾಶೀರ್ವಾದ ಒದಗಿಸುವಲ್ಲಿ ಅರ್ಚಕರ ಪಾತ್ರ ಹೆಚ್ಚಿನದು. ತಮ್ಮದು ವೃತ್ತಿ ಎಂದು ಭಾವಿಸದೇ ಅನುಷ್ಠಾನ, ಶೃದ್ಧೆ, ನಿಷ್ಠೆಗಳಿಂದ ಕಾರ್ಯನಿರ್ವಹಿಸುತ್ತ ಬಂದ ಹಿರಿಯ ಅರ್ಚಕ ವೇ.ತಿಮ್ಮಣ್ಣ ಭಟ್ಟ ಅವರನ್ನು ಗೌರವಿಸಿರುವುದು ಅತ್ಯಂತ ಮಹತ್ವದ ಕಾರ್ಯ ಎಂದರು.

ಉದ್ಯಮಿ ನಿತಿನ್ ಭಟ್, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ನಾಯ್ಕ ಉಪಸ್ಥಿತರಿದ್ದರು. ದೇವಾಲಯ ಆಡಳಿತ ಮಂಡಳಿ ಸದಸ್ಯ ಅಣ್ಣಪ್ಪ ನಾಯ್ಕ ಹಣಜೀಬೈಲ್ ಸ್ವಾಗತಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಮತ್ತು ಅಂಬೇಡ್ಕರ ಕಾಲನಿ, ಪಟ್ಟಣ ಪಂಚಾಯಿತಿ ಪೌರ ಕಾರ್ವಿುಕರು ಹಾಗೂ ನಿವಾಸಿಗಳು ವೇ. ತಿಮ್ಮಣ್ಣ ಭಟ್ಟ ಅವರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net