ಆಶ್ರಯ ಮನೆ ಪೂರ್ಣ ಯಾವಾಗ?: ಕೆ.ಎಸ್.ಈ ಪ್ರಶ್ನೆ

Kse
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಶಿವಮೊಗ್ಗ: ನಗರದ ಗೋಪಶೆಟ್ಟಿಕೊಪ್ಪ ಹಾಗೂ ಗೋವಿಂದಾಪುರ ಆಶ್ರಯ ಬಡಾವಣೆಗಳಲ್ಲಿ ಬಾಕಿ ಉಳಿದ ಮನೆಗಳ ನಿರ್ಮಾಣ ಯಾವಾಗ? ಈಗ ನಿರ್ಮಾಣವಾಗಿರುವ ಮನೆಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಎಂದಿಗೆ? ಇದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ರಾಜ್ಯ ಸರ್ಕಾರದ ಮುಂದಿರಿಸಿರುವ ಪ್ರಶ್ನೆಗಳು.

ವಸತಿ ಸಚಿವ ಜಮೀರ್ ಅಹ್ಮದ್ ಗೋವಿಂದಾಪುರಕ್ಕೆ ಬಂದು 652 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿ ಹೋಗಿದ್ದಾರೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಯಾವಾಗ? ವಿದ್ಯುತ್ ಸಂಪರ್ಕಕ್ಕೆ 12 ಕೋಟಿ ರೂ. ಅಗತ್ಯವಿದೆ. ಅದನ್ನು ಬಿಡುಗಡೆ ಮಾಡಲು ಸಚಿವ ಸಂಪುಟದ ಅನುಮತಿ ಬೇಕೆ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಾನು ಸಚಿವನಾಗಿದ್ದ ಅವಧಿಯಲ್ಲಿ ವಿತರಿಸಿದ್ದು ಸೇರಿದಂತೆ ಒಟ್ಟು 1,272 ಮನೆಗಳನ್ನು ಇದುವರೆಗೆ ಫಲಾನುಭವಿಗಳಿಗೆ ನೀಡಲಾಗಿದೆ. ಇನ್ನೂ 1,728 ಮನೆಗಳ ನಿರ್ಮಾಣ ಬಾಕಿಯಿದೆ. ಇವುಗಳನ್ನು ನಿರ್ಮಿಸುವುದು ಮತ್ತು ವಿತರಿಸುವುದು ಯಾವಾಗ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಗೋವಿಂದಾಪುರದಲ್ಲಿ ಮನೆ ಕಟ್ಟಿದ ಗುತ್ತಿಗೆದಾರನಿಗೆ 24 ಕೋಟಿ ರೂ. ಬಾಕಿ ನೀಡಬೇಕಿದೆ. ಸರ್ಕಾರದಿಂದ ಈ ಹಣ ನೀಡುವವರೆಗೂ ಆತ ಉಳಿದ ಮನೆಗಳನ್ನು ನಿರ್ಮಿಸಲು ಸಿದ್ಧನಿಲ್ಲ. ನಾನು ಶಾಸಕನಾಗಿದ್ದಾಗ ಪ್ರಯತ್ನಪಟ್ಟು ಮೂರು ಸಾವಿರ ಮನೆಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದೆ ಎಂದರು.

ಗೋಪಶೆಟ್ಟಿಕೊಪ್ಪದಲ್ಲಿ 1,836 ಮನೆಗಳು ನಿರ್ಮಾಣವಾಗಬೇಕಾಗಿದೆ. 500ಕ್ಕೂ ಹೆಚ್ಚು ಮಂದಿ ಈ ಬಡಾವಣೆಯಲ್ಲಿ ಪೂರ್ಣ ಹಣ ಪಾವತಿಸಿದ್ದಾರೆ. ಗುತ್ತಿಗೆದಾರ ಸುಮಾರು ಮೂರು ಕೋಟಿ ರೂ. ಮೊತ್ತದ ಕೆಲಸ ಮಾಡಿ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾನೆ. ಈಗ ಸೂರಿಗಾಗಿ ಹಣ ಕಟ್ಟಿದವರ ಗತಿಯೇನು? ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಮನೆ ಕಟ್ಟಿಕೊಡಲಿ. ಇಲ್ಲದಿದ್ದರೆ ಬಡವರ ಹಣವನ್ನು ವಾಪಸ್ ಕೊಡಲಿ ಎಂದು ಕಿಡಿಕಾರಿದರು.

ನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಮೋಹನ್ ಜಾದವ್, ರಾಜು, ಶಿವಾಜಿ, ಶಿವು, ಮೋಹನ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net