

ಲಕ್ಷ್ಮೇಶ್ವರ: 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಶವ ಸಾಗಣೆಗೆ ಬಳಸುವ ಚಿಕ್ಕ, ಚೊಕ್ಕ ವಾಹನ ಬೇಕಾಗಿದೆ.
ಸದ್ಯ ಪಟ್ಟಣದ ಪುರಸಭೆಯ ಮುಕ್ತಿವಾಹಿನಿ (ಗೂಡ್ಸ್) ವಾಹನ ಬಹಳಷ್ಟು ಹಳೆಯದಾಗಿದ್ದು, ತುಕ್ಕು ಹಿಡಿದಿದೆ. ಹತ್ತಾರು ವರ್ಷಗಳಷ್ಟು ಹಳೆಯ ಮುಕ್ತಿವಾಹಿನಿ ವಾಹನ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತದೆ. ಒಂದೇ ದಿನ 4 ಜನರು ಮೃತಪಟ್ಟರೆ ಇರುವ ಒಂದೇ ವಾಹನಕ್ಕೆ ಕಾಯಬೇಕಾಗುತ್ತದೆ. ಅನೇಕ ಬಾರಿ ವಾಹನಕ್ಕಾಗಿ ಜಗಳ, ತಂಟೆ- ತಕರಾರು ಜರುಗಿದ ನಿದರ್ಶನಗಳಿವೆ. ಅನಿವಾರ್ಯ ಸಂದರ್ಭದಲ್ಲಿ ಗದಗ ಸೇರಿದಂತೆ ಬೇರೆ ಬೇರೆ ಭಾಗದಿಂದ ಮುಕ್ತಿವಾಹಿನಿ ವಾಹನವನ್ನು ತರಿಸಲಾಗುತ್ತಿದೆ. ಅಲ್ಲದೆ, ವಾಹನದಲ್ಲಿ ಎಲ್ಲೆಂದರಲ್ಲಿ ತಗಡು ಕಿತ್ತುಬರುವಂತಿದ್ದು, ಮುಟ್ಟಿದರೆ ಮೈ ಕೈ ಹರಿದು ರಕ್ತ ಸೋರುವ ಸ್ಥಿತಿಯಲ್ಲಿದೆ. ಸದಾ ರಿಪೇರಿಯಲ್ಲಿರುವ ವಾಹನ ಶವ ಸಾಗಿಸುವ ವೇಳೆಯೂ ಕೈಕೊಡುವ ಸ್ಥಿತಿಯಲ್ಲಿದೆ. ಇಷ್ಟೆಲ್ಲ ಸಮಸ್ಯೆಗಳು ಇರುವುದರಿಂದ ಮತ್ತು ಹೊಸ ವಾಹನದ ಅಗತ್ಯವೂ ಇರುವುದರಿಂದ ಸುಸಜ್ಜಿತ ಮುಕಿವಾಹನವನ್ನು ಪುರಸಭೆಯಿಂದ ಖರೀದಿಸಿ ಸಾರ್ವಜನಿಕರಿಗೆ ಸೇವೆ ಕಲ್ಪಿಸಬೇಕು ಎಂಬುದು ಬಸವರಾಜ ಮೆಣಸಿನಕಾಯಿ, ಶಿವಪ್ಪ ಕಟಗಿ ಇತರರ ಒತ್ತಾಸೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಹೊಸ ಮುಕ್ತಿವಾಹಿನಿ ವಾಹನ ಖರೀದಿಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದ್ದು, 10 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿದೆ. ಮುಕ್ತಿವಾಹಿನಿ ವಿಶೇಷ ವಾಹನ ತಯಾರಿಸಿಕೊಡುವಂತೆ ವಾಹನ ಕಂಪನಿಯವರೊಂದಿಗೆ ಮಾತನಾಡಿದ್ದೇವೆ. ಆದಷ್ಟು ಬೇಗ ಹೊಸ ವಾಹನ ಖರೀದಿಸಲಾಗುವುದು ಮತ್ತು ಸದ್ಯದ ವಾಹನ ದುರಸ್ತಿಗೊಳಿಸಲಾಗುವುದು ಎಂದರು.