ಕೆಸರು ಗದ್ದೆಯಂತಿರುವ ರಸ್ತೆ ದುರಸ್ತಿ ಯಾವಾಗ?

FotoJet
Published on

ಬೂದಿಕೋಟೆ: ತಾಲೂಕಿನ ಎ ಮತ್ತು ಬಿ ಹೊಸಮನೆಗಳು ಹಾಗೂ ತಂಗೇಡಿಮಿಟ್ಟೆ ಗ್ರಾಮಗಳ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ, ಗ್ರಾಮಸ್ಥರು ಕೆಸರು ಗದ್ದೆಯಂತಿರುವ ಸದರಿ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ತಾಲೂಕಿನ ಕಾಮಸಮುದ್ರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಎ ಹೊಸಮನೆಗಳು, ಬಿ ಹೊಸಮನೆಗಳು ಮತ್ತು ತಂಗಾಡಿಮಿಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಮಳೆ ಬಂದರೆ ಮಾರ್ಗ ಕೆಸರುಗದ್ದೆಯಂತಾಗಿ, ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಚುನಾವಣೆ ಸಮಯದಲ್ಲಿ ರಸ್ತೆ ಅಭಿವೃದ್ಧಿಪಡಿಸುತ್ತೇವೆ ಮತ್ತು ಗ್ರಾಮಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಗ್ರಾಮಗಳಿಗೆ ಬರುವ ಜನಪ್ರತಿನಿಧಿಗಳು ಹಾಗೂ ಮುಖಂಡರು, ಚುನಾವಣೆ ಬಳಿಕ ನಾಪತ್ತೆೆಯಾಗುತ್ತಾರೆ. ಕಳೆದ 25 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ತಿಂಗಳಿಗೊಮ್ಮೆರಸ್ತೆಯ ಎರಡೂ ಬದಿಯ ಗಿಡಗಂಟಿಗಳನ್ನು ಪಂಚಾಯಿತಿಯಿಂದ ತೆರವು ಮಾಡಿ ನರೇಗಾ ಯೋಜನೆಯಲ್ಲಿ ಎನ್​ಎಂಆರ್​ ತೆಗೆದು ಹೋಗುತ್ತಾರೆ ಹೊರೆತು ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಎ ಹೊಸಮನೆಗಳು, ಬಿ ಹೊಸಮನೆಗಳು ಮತ್ತು ತಂಗಾಡಿಮಿಟ್ಟೆ ಗ್ರಾಮಗಳ ಜನರು ಇದೇ ಮಾರ್ಗದಲ್ಲಿ ಪ್ರತಿದಿನ ಮೂಗನಹಳ್ಳಿಯ ಹಾಲಿನ ಡೇರಿಗೆ ಹಾಲು ತೆಗೆದುಕೊಂಡು ಹೋಗುತ್ತಾರೆ. ಇನ್ನು ಶಾಲಾ&ಕಾಲೇಜು ಮಕ್ಕಳು ಮಾರುದ್ದದ ಗುಂಡಿಗಳಲ್ಲಿ ಎದ್ದು, ಬಿದ್ದು ಶಾಲೆಗೆ ಹೋಗಬೇಕು. ಈ ಬಗ್ಗೆ ಯಾವೊಬ್ಬ ಗ್ರಾಪಂ ಸದಸ್ಯರೂ ತಲೆ ಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದರು.

ಬೇಸಿಗೆಯಲ್ಲಿ ರಸ್ತೆಯು ಗುಂಡಿಮಯವಾದರೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಬೈಕ್​ ಸವಾರರು ಹಲವು ಬಾರಿ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಗ ಒತ್ತುವರಿ?

ಎ ಮತ್ತು ಬಿ ಹೊಸಮನೆಗಳು ಹಾಗೂ ತಂಗೇಡಿಮಿಟ್ಟೆ ಗ್ರಾಮಗಳ ಮಾರ್ಗವು ಒತ್ತುವರಿಯಾಗಿದ್ದು, ಇದರಿಂದಾಗಿ ರಸ್ತೆ ಅಭಿವೃದ್ಧಿಪಡಿಸಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಅದುಬಿಟ್ಟು ಒತ್ತುವರಿಯಾಗಿರುವ ರಸ್ತೆ ತೆರವಿಗೆ ಯಾರೂ ಮುಂದಾಗುತ್ತಿಲ್ಲ. ರಸ್ತೆ ಅಭಿವೃದ್ಧಿಗಾಗಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮತ್ತು ಸಂಸದ ಮಲ್ಲೇಶ್​ ಬಾಬು ಅವರನ್ನು ಈಗಾಗಲೇ ಒತ್ತಾಯಿಸಲಾಗಿದೆ. ಸಂಸದರು ಜಿಲ್ಲಾಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಆದ್ದರಿಂದ ಸ್ಥಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ, ರಸ್ತೆ ದುರಸ್ತಿಗೊಳಿಸಬೇಕು ಇಲ್ಲವಾದರೆ ಮುಂಬರುವ ಜಿಲ್ಲಾ ಮತ್ತು ತಾಪಂ ಚುನಾವಣೆಗಳಲ್ಲಿ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net