ಮೇಕೆದಾಟು ಯೋಜನೆ ಜಾರಿ ಯಾವಾಗ?

09-03
Published on

ವಾಟಾಳ್ ನಾಗರಾಜ್ ಪ್ರಶ್ನೆ ಅತ್ತಿಬೆಲೆ ಬಳಿ ಪ್ರತಿಭಟನೆ 22ರಂದು ಕರ್ನಾಟಕ ಬಂದ್‌ಗೆ ಕರೆ

ಆನೇಕಲ್: ಮೇಕೆದಾಟು ಯೋಜನೆ ಕಾಮಗಾರಿಯನ್ನು ಈ ಕೂಡಲೇ ಕೈಗೆತ್ತಿಕೊಳ್ಳುವುದು, ಬೆಳಗಾವಿಯಲ್ಲಿನ ಮರಾಠಿಗರ ಪುಂಡಾಟಿಕೆಗೆ ಕಡಿವಾಣ ಹಾಕುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ರಾಜ್ಯದ ಗಡಿ ಅತ್ತಿಬೆಲೆ ಬಳಿ ಬೃಹತ್ ಪ್ರತಿಭಟನೆ ನಡೆಸಿದವು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥದೇವ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾರ್ಯಕರ್ತರು, ಅತ್ತಿಬೆಲೆ ಟೋಲ್‌ನಿಂದ ಗಡಿ ಗೋಪುರದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಅತ್ತಿಬೆಲೆ ಕಡೆ ಗೋಪುರದ ಎದುರು ಪ್ರತಿಭಟನೆ ಕೈಗೊಂಡರು.

ಕನ್ನಡಪ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, 10 ವರ್ಷದ ಹಿಂದೆಯೇ ಮೇಕೆದಾಟು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪೂಜೆ ಸಲ್ಲಿಸಲಾಗಿತ್ತು. ಆದರೆ ಯೋಜನೆಯನ್ನು ತಮಿಳುನಾಡು ಸರ್ಕಾರ ನಿರಂತರವಾಗಿ ವಿರೋಧಿಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಅತ್ತಿಬೆಲೆಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಇನ್ನು ಇದೇ ನೆಪದಲ್ಲಿ ಇಲ್ಲಿನ ಸರ್ಕಾರಗಳು ಮೇಕೆದಾಟು ಯೋಜನೆಗೆ ಒತ್ತು ನೀಡುತ್ತಿಲ್ಲ. ಇನ್ನೊಂದೆಡೆ ಬೆಳಗಾವಿಯಲ್ಲಿ ಮರಾಠಿಗರು ಪುಂಡಾಟಿಕೆ ಮೆರೆಯುತ್ತಿದ್ದು, ನಮ್ಮ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದನ್ನು ಹತ್ತಿಕ್ಕುವ ಬದಲು ರಾಜ್ಯದಲ್ಲಿ ಮರಾಠಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗುತ್ತಿದೆ. ಹಾಗಾಗಿ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಮಾ.22ರಂದು ಅಖಂಡ ಕರ್ನಾಟಕ

ಬಂದ್‌ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥದೇವ ಮಾತನಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯದ ಗಡಿ ಅತ್ತಿಬೆಲೆ ಮಾ.22ರಂದು ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ತಮಿಳುನಾಡು ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಾಡು, ನುಡಿ ಜಲದ ವಿಚಾರದಲ್ಲಿನ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಆನೇಕಲ್ ಸನಾವುಲ್ಲ, ಕೆ.ನಾಗರಾಜು, ಜ್ಯೋತಿ ಕುಮಾರ್, ಗುಡ್ದಟ್ಟಿ ರಾಮಸ್ವಾಮಿ, ಆರ್.ಮಧುಕುಮಾರ್, ಆರ್.ಸತೀಶ್ ರಾಜ್, ಗೀತಾ, ರೇಣುಕಾ, ಜಯಂತಿ, ಶೈಲಜಾ ಇದ್ದರು.

ಪೊಲೀಸ್ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಅಡಿಷನಲ್ ಎಸ್‌ಪಿ, ಡಿವೈಎಸ್ಪಿ ಹಾಗೂ 7 ಇನ್‌ಸ್ಪೆಕ್ಟರ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ರಾಜ್ಯದ ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ಹಿನ್ನೆಲೆಯಲ್ಲಿ ಅತ್ತ ತಮಿಳುನಾಡು ಗಡಿಯಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಹೆದ್ದಾರಿ ಬಳಿ ಕನ್ನಡ ಪರ ಹೋರಾಟಗಾರರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ ತಮಿಳುನಾಡಿನಿಂದ ಬರುತ್ತಿದ್ದ ವಾಹನ ತಡೆಯಲಾಗಿತ್ತು. ಇನ್ನು ಪ್ರತಿಭಟನೆ ವೇಳೆ ರಾಜ್ಯದ ಗಡಿ ದಾಟಿ ತಮಿಳುನಾಡಿನತ್ತ ಹೋಗಲು ಯತ್ನಿಸಿದ ವಾಟಳ್ ನಾಗರಾಜ್ ಹಾಗೂ ಕನ್ನಡಪರ ಹೋರಾಟಗಾರರನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಎರಡು ಬಸ್‌ಗಳಲ್ಲಿ ಪ್ರತಿಭಟನಾಕಾರರನ್ನು ಠಾಣೆಯಲ್ಲಿ ಕರೆದೊಯ್ಯಲಾಯಿತು.

ಒಂದೆಡೆ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಕಾರ್ಯರೂಪಕ್ಕೆ ತರಲು ಹಿಂದೇಟಾಕುತ್ತಿದೆ. ಇತ್ತ ವಿರೋಧ ಪಕ್ಷ ಶಕ್ತಿ ಹೀನವಾಗಿ ಕೂತಿದೆ. ಯಡಿಯೂರಪ್ಪ ಸೇರಿ ಯಾರೂ ಮೇಕೆದಾಟು ಯೋಜನಗೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕನ್ನಡ ಪರ ಹೋರಾಟಗಾರರು ಬಿಸಿ ಮುಟ್ಟಿಸುತ್ತೇವೆ. -ಸಾರಾ ಗೋವಿಂದು, ಕನ್ನಡಪರ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net