ಭೂಸ್ವಾಧಿನ ರದ್ದು ಆದೇಶ ಯಾವಾಗ?

17 10 2025_BGR_RURAL-PAGE_5B
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚನ್ನರಾಯಪಟ್ಟಣದ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಕಾರಳ್ಳಿ ಶ್ರೀನಿವಾಸ್​, ಜಯರಾಮೇಗೌಡ, ಮಾರೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ ಅಶ್ವತ್ಥಪ್ಪ, ಸುಬ್ರಹ್ಮಣಿ, ಕೃಷ್ಣಪ್ಪ, ವೆಂಕಟಮ್ಮ, ಪಿಳಪ್ಪ, ವೆಂಕಟೇಶ್​, ಗೋಪಾಲಗೌಡ, ಮಂಜುನಾಥ್​, ಗೋಪಿನಾಥ್​, ಗೋಪಾಲಪ್ಪ ಇದ್ದರು.
Published on

ದೇವನಹಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿ ಮೂರು ತಿಂಗಳು ಕಳೆದರೂ ಚನ್ನರಾಯಪಟ್ಟಣ ಭೂಸ್ವಾಧಿನ ರದ್ದುಪಡಿಸುವ ಅಧಿಕೃತ ಡಿನೋಟಿಫಿಕೇಶನ್​ ಆದೇಶವನ್ನು ಸರ್ಕಾರ ಹೊರಡಿಸದಿರುವ ಕಾರಣ ಆತಂಕ ಹೆಚ್ಚಾಗಿದ್ದು, ರೈತರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚನ್ನರಾಯಪಟ್ಟಣದ ಭೂಸ್ವಾಧಿನ ವಿರೋಧಿ ಹೋರಾಟಗಾರರು ಈ ಸಂಬಂಧ ಪ್ರತಿಭಟನೆ ಕೂಡ ಮಾಡಿದರು. ಹೋರಾಟಗಾರ್ತಿ ಬೆಳವಂಗಲ ಪ್ರಭಾ ಮಾತನಾಡಿ, ಕೈಗಾರಿಕಾ ಸಚಿವರು ಅ.17ಕ್ಕೆ ಬ್ರಿಗೇಡ್​ ೌಂಡೇಷನ್​ ಸಹಯೋಗದಲ್ಲಿ ಲಕ್ಷ ಗಿಡಗಳ ನೆಡುವ ಕಾರ್ಯಕ್ರಮಕ್ಕಾಗಿ ಹರಳೂರು ಬಳಿಯ ಏರೋಸ್ಪೇಸ್​ ಡಿಫೆನ್ಸ್​ ಪಾರ್ಕ್​ಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಶತಮಾನಗಳಿಂದ ಲಕ್ಷಾಂತರ ಗಿಡಮರ ನೆಟ್ಟು ಪೋಷಿಸುತ್ತಿರುವ ರೈತರು ಆತಂಕದಲ್ಲಿದ್ದಾರೆ. ಇದು ವೈರುಧ್ಯವೇ ಸರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರದ ಆದೇಶದಂತೆ ತಿಂಗಳೊಳಗೆ ಡಿನೋಟಿಫಿಕೇಶನ್​ ಮಾಡುವ ಭರವಸೆ ನೀಡಿ ಕಾರ್ಯರೂಪಕ್ಕೆ ತರಬೇಕು ಎಂದು ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್​ ಒತ್ತಾಯಿಸಿದರು. ಅಧಿಕೃತ ಆದೇಶ ಹೊರಬೀಳುವವರೆಗೆ ರೈತರ ಆತಂಕ ನಿವಾರಣೆಯಾಗುವುದು ಕಷ್ಟ. ರೈತರ ಸಮಸ್ಯೆ ಬಗೆಹರಿಸುವುದು ಉಸ್ತುವಾರಿ ಸಚಿವರ ಜವಾಬ್ದಾರಿ ಎಂದರು. ರೈತ ಮುಖಂಡರಾಧ ವೆಂಕಟೇಶ್​, ಚೀಮಾಚನಹಳ್ಳಿ ರಮೇಶ್​, ಪ್ರಮೋದ್​, ನಾಗರಾಜು, ಮುನಿಯಪ್ಪ, ಗೋವಿಂದಪ್ಪ ಮುನಿರಾಜು, ಮಧು, ವಿನೋದ್​, ವೆಂಕಟರಮಣಪ್ಪ ಇತರರು ಇದ್ದರು.

ಮೌಖಿಕ ಆದೇಶಕ್ಕೆ ಸಿಗದ ಅಧಿಕೃತ ಮುದ್ರೆ : ಚನ್ನರಾಯಪಟ್ಟಣದ ರೈತರು ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ನಡೆಸಿದ ತೀವ್ರ ಸಂಘರ್ಷಮಯ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ಅವರು ಜು.15 ರಂದು ಭೂಸ್ವಾಧಿನ ಪ್ರಕ್ರಿಯೆ ಸಂಪೂರ್ಣ ಕೈಬಿಡುವುದಾಗಿ ಘೋಷಿಸಿದ್ದರು. ಸರ್ಕಾರ ಇದನ್ನು ರೈತಪರ ನಿಲುವು ಎಂದು ವ್ಯಾಪಕ ಪ್ರಚಾರ ಮಾಡಿತ್ತು. ಆದರೆ, ಘೋಷಣೆ ಹೊರಬಿದ್ದು ತಿಂಗಳುಗಳೇ ಕಳೆದರೂ ಸರ್ಕಾರದ ಮೌಖಿಕ ಆದೇಶವು ಡಿನೋಟಿಫಿಕೇಶನ್​ ರೂಪದಲ್ಲಿ ಅಧಿಕೃತವಾಗಿ ಹೊರಬಂದಿಲ್ಲ. ಈ ಮಧ್ಯೆ ಸರ್ಕಾರದ ಘೋಷಣೆಗೆ ವ್ಯತಿರಿಕ್ತವಾಗಿ ಎರಡು ಹಳ್ಳಿಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರ ನಡೆದಿದ್ದು, ರೈತರ ಪ್ರತಿರೋಧದ ನಂತರ ಸಭೆ ಮುಂದೂಡಲಾಗಿದೆ. ಈ ಎಲ್ಲ ವಿದ್ಯಮಾನ ಗಮನಿಸಿದರೆ ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲೇ ರೈತರು ಬದುಕುವಂತಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆತಂಕ ಹೆಚ್ಚಿಸಿದೆ.

ಹೋರಾಟ ತೀವ್ರಕ್ಕೆ ರೈತರ ಸಿದ್ಧತೆ : ಡಿನೋಟಿಫಿಕೇಶನ್​ ಆದೇಶ ವಿಳಂಬದಿಂದ ರೋಸಿಹೋಗಿರುವ ರೈತರು ಹೋರಾಟ ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ತಮ್ಮ ತಮ್ಮ ಊರುಗಳಲ್ಲಿ ಸಭೆ ಕರೆಯುವ ಮೂಲಕ ಸಂಘಟನೆ ಗಟ್ಟಿಗೊಳಿಸಿಕೊಂಡು ಹೋರಾಟ ಚುರುಕುಗೊಳಿಸಲು ಮುಂದಾಗಿದ್ದಾರೆ.

ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಕೂಡ ಭೂಸ್ವಾಧಿನ ರದ್ಧತಿ ಆದೇಶಕ್ಕೆ ಸಾಕ್ಷಿಯಾಗಿದ್ದರು. ಮೂರು ತಿಂಗಳಾದರೂ ಆದೇಶ ಜಾರಿಯಾಗದಿರುವುದನ್ನು ಅವರು ಸೂಕ್ಷ$್ಮವಾಗಿ ಪರಿಗಣಿಸಬೇಕು. ಅಲ್ಲದೆ, ರೈತರ ಹಿತ ಕಾಯುವುದು ಮತ್ತು ಸಮಸ್ಯೆ ಬಗೆಹರಿಸುವುದು ಉಸ್ತುವಾರಿ ಸಚಿವರ ಜವಾಬ್ದಾರಿ. ಅದರಂತೆ ಡಿನೋಟಿಫಿಕೇಶನ್​ ಆದೇಶ ಹೊರಡಿಸಲು ಕ್ರಮವಹಿಸಬೇಕು. > ನಲ್ಲಪನಹಳ್ಳಿ ನಂಜಪ್ಪ ಹೋರಾಟ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net