ಘಟಿಕೋತ್ಸವದ ಲೆಕ್ಕಪತ್ರ ಮಂಡನೆ ಯಾವಾಗ ?

Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ 12 ಹಾಗೂ 13ನೇ ವಾರ್ಷಿಕ ಘಟಿಕೋತ್ಸವದ ಲೆಕ್ಕಪತ್ರಗಳೇ ಈವರೆಗೆ ಮಂಡನೆಯಾಗದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ತಿಂಗಳು ಸೆಪ್ಟೆಂಬರ್ 4ರಂದು ಆಯೋಜಿಸಿದ್ದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ನಾನಾ ಕ್ಷೇತ್ರಗಳ ಗೌರವ ಡಾಕ್ಟರೇಟ್ ಪದವಿಗಾಗಿ ಸೂಕ್ತ ಸಾಧಕರ ಸ್ವವಿವರ ಪಡೆಯಲು ದಿನಾಂಕ ನಿಗದಿಪಡಿಸುವ ಕುರಿತು, ತಗಲುಬಹುದಾದ ವೆಚ್ಚದ ಪಟ್ಟಿಯನ್ನು ಅನುಮೋದಿಸುವ ಕುರಿತು, ಪ್ರದಾನ ಮಾಡಲಿರುವ ನಾನಾ ಪದವಿಗಳ ರ‌್ಯಾಂಕ್‌ಗಳ ಮತ್ತು ಚಿನ್ನದ ಪದಕ ಪಡೆದವರ ಪಟ್ಟಿ ತಯಾರಿಸಲು, ನಾನಾ ಸಮಿತಿ ರಚಿಸಲು, ಗಣ್ಯರ ಸ್ವವಿವರ ಪರಿಶೀಲಿಸಲು ತಜ್ಞರ, ಪರಿಶೀಲನಾ ಸಮಿತಿ ರಚನೆ, ಮುಖ್ಯ ಅತಿಥಿಗಳ ನಾಮನಿರ್ದೇಶನ ಸೇರಿದಂತೆ ಕಳೆದ ತಿಂಗಳು ನಡೆದಿದ್ದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿತ್ತು. ಅಲ್ಲದೆ, ಘಟಿಕೋತ್ಸವದ ನಾನಾ ಕಾರ್ಯಕ್ರಮದ ವೆಚ್ಚಗಳಿಗಾಗಿ 60 ಲಕ್ಷ ರೂ. ಕೂಡ ಅನುಮೋದನೆ ಪಡೆಯಲಾಗಿತ್ತು. ಒಂದು ದಿನದ ಘಟಿಕೋತ್ಸವಕ್ಕೆ ಇಷ್ಟು ಹಣ ಏಕೆ ?. ದುಂದು ವೆಚ್ಚಕ್ಕೆ ಅಥವಾ ಅಕ್ರಮ ಎಸಗಲು ಕಾರಣವಾಗಲಿದೆ ಎಂದು ಕೆಲ ಸಿಂಡಿಕೇಟ್ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಘಟಿಕೋತ್ಸವ ಪೂರ್ಣಗೊಂಡ ನಂತರವೇ ಕಳೆದ ಎರಡು ವಾರ್ಷಿಕೋತ್ಸವದ ಲೆಕ್ಕಪತ್ರಗಳನ್ನು ಮಂಡಿಸುವುದಾಗಿ ಕುಲಪತಿ ತಿಳಿಸಿದ್ದರು ಎಂಬುದಾಗಿ ಮೂಲಗಳು ತಿಳಿಸಿದವು. ಆದರೆ, ಘಟಿಕೋತ್ಸವ ಮುಗಿದ ಒಂದು ತಿಂಗಳು ಕಳೆದರೂ ಎರಡು ಘಟಿಕೋತ್ಸವದ ಒಂದು ಲೆಕ್ಕಪತ್ರ ಕೂಡ ಮಂಡನೆಯಾಗದೆ ಇರುವುದು ಅನುಮಾನ ಮೂಡಿಸಿದೆ.

13ನೇ ಘಟಿಕೋತ್ಸವದ ವಿವಾದ : ಇಲ್ಲಿನ ವಿವಿಯ 13ನೇ ವಾರ್ಷಿಕ ಘಟಿಕೋತ್ಸವ ನಾನಾ ವಿವಾದಗಳಿಗೆ ಕಾರಣವಾಯಿತು. ಮೂರು ಗೌರವ ಡಾಕ್ಟರೇಟ್‌ಗಳಲ್ಲಿ ಎರಡು ಉದ್ಯಮಿಗಳಿಗೆ ನೀಡುವ ಮೂಲಕ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಕಲಾವಿದರನ್ನು ಆಯ್ಕೆ ಮಾಡಿಲ್ಲ ಎಂಬ ಆರೋಪಕ್ಕೆ ಗುರಿಯಾಯಿತು. ಆರಂಭಲ್ಲಿ ಸಮಾರಂಭದ ಪೆಂಡಲ್ ಹಾಗೂ ಅಲಂಕಾರಿಕ ವಸ್ತುಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದೆ ಎಂಬ ಸುದ್ದಿ ವ್ಯಾಪಕ ಹರಡಿತ್ತು. ಸಾಗಣೆ ವೆಚ್ಚ ಕೂಡ ಹೆಚ್ಚಲಿದೆ ಹಾಗೂ ಸ್ಥಳೀಯರಿಗೆ ಮಾನ್ಯತೆ ನೀಡಿಲ್ಲ ಎಂಬುದಾಗಿ ಅಕ್ರೋಶಗೊಂಡ ಬೆನ್ನಲೇ ಕೊನೆ ವೇಳೆಗೆ ಸ್ಥಳೀಯರ ಪೆಂಡಲ್ ಹಾಕಲು ಅನುಮತಿ ನೀಡಲಾಯಿತು. ಅಲ್ಲದೆ, ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಮೌಲ್ಯದ ಪ್ರಮಾಣ ಪತ್ರಗಳನ್ನು ಖರೀದಿಸಲಾಗಿದೆ. ಘಟಿಕೋತ್ಸವದ ಊಟದ ವ್ಯವಸ್ಥೆಗೆ ನಾನಾ ರೀತಿಯ ಉತ್ತರ ಕರ್ನಾಟಕ ಶೈಲಿಯ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಸ್ವತ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದ್ದರು. ಭೋಜನ ಸವಿದವರು ಮಾತ್ರ ಪ್ರತಿ ವರ್ಷದಂತೆ ಈ ವರ್ಷ ಕೂಡ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರಿಗೆ ಊಟಕ್ಕೆ ಸೂಕ್ತ ಆಸನ ವ್ಯವಸ್ಥೆ ಸರಿಯಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ಬಾಕ್ಸ್ : ಕಳೆದ ಒಂದು ವರ್ಷದಲ್ಲಿ ವಿವಿಯಲ್ಲಿ ಮೀಟರ್ ಬಡ್ಡಿ ದಂಧೆ, ದಾಖಲಾತಿ ಕುಸಿತ, ಹೊರ ಗುತ್ತಿಗೆ ನೌಕರರ ವೇತನದಲ್ಲಿ ಅಕ್ರಮ, ಕಳ್ಳಂಕ ನೀಡಿದವರಿಗೆ ದಂಡ ಪ್ರಹಾರ, ಬಿ.ಇಡಿ ಫಲಿತಾಂಶ ತಡೆ, ಅಂಕಪಟ್ಟಿ ಗೊಂದಲ, ಘಟಿಕೋತ್ಸವಕ್ಕೆ 60 ಲಕ್ಷ ರೂ. ಏಕೆ ?ಸೇರಿದಂತೆ ಕಳೆದ ಒಂದು ವರ್ಷದಿಂದ ನಾನಾ ವಿವಾದಗಳ ಬಗ್ಗೆ ಸೆ.3ರಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕುಲಪತಿಗಳನ್ನು ಸುದ್ದಿಗಾರರು ಪ್ರಶ್ನಿಸಿದ್ದರು. ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ಸೆ. 25ರೊಳಗೆ ಸುದ್ದಿಗೋಷ್ಠಿ ನಡೆಸಿ ಯಾವೆಲ್ಲ ತನಿಖೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಬಹಿರಂಗ ಪಡಿಸುವೆ ಎಂದು ಕುಲಪತಿ ಪ್ರೊ. ಮುನಿರಾಜು ತಿಳಿಸಿದ್ದರು. ಘಟಿಕೋತ್ಸವ ನಂತರ ಮಾಧ್ಯಮದ ಮುಂದೆ ಹೇಳಿದ ಮಾತು ಮರೆತಿದ್ದಾರೆ.

ಕೋಟ್... ಅನಾರೋಗ್ಯ ಕಾರಣದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಲೆಕ್ಕಪತ್ರಗಳ ಮಂಡನೆ ವಿಳಂಬವಾಗಿದೆ. 13ನೇ ಘಟಿಕೋತ್ಸವದ ವೆಚ್ಚದ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಮಾಹಿತಿ ನೀಡಿ. ನಂತರ ವಿವರವನ್ನು ಬಹಿರಂಗಪಡಿಸುವೆ.

- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ ವಿವಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net