ಭಕ್ತಿ, ಶ್ರದ್ಧೆ ಇದ್ದಾಗ ದೇವರ ಅನುಗ್ರಹ ಕಾವೂರ ಬ್ರಹ್ಮಕಲಶೋತ್ಸವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ

mng-mar1-kavoor2
Published on

ಮಂಗಳೂರು: ನಂಬಿಕೆ, ಭಕ್ತಿ, ಶ್ರದ್ಧೆ ಇದ್ದಾಗ ದೇವರ ಅನುಗ್ರಹ ದೊರೆಯುತ್ತದೆ. ನಮ್ಮ ಮನಸ್ಸು, ಹೃದಯ ಸ್ವಚ್ಛವಾಗಿದ್ದಾಗ ದೇವರು ಹೃದಯದಲ್ಲಿ ನೆಲೆಸುತ್ತಾನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನ ಶನಿವಾರ ನೂತನ ಸಭಾ ಭವನ ಉದ್ಘಾಟಿಸಿ, ಧಾರ್ಮಿಕ ಸಭೆಯಲ್ಲಿ ಶುಭ ಸಂದೇಶ ನೀಡಿದರು.

ಬ್ರಹ್ಮಕಲಶದ ಮೂಲಕ ಸರ್ವರೂ ಜತೆಯಾಗಿ ದೇವಾಲಯವನ್ನು ಸ್ವಚ್ಛಗೊಳಿಸಿದಾಗ ಭಕ್ತರು ದೇವರನ್ನು ಒಲಿಸಿಕೊಳ್ಳಲು ಸಾಧ್ಯ. ಕಾವೂರು ಮಹಾಲಿಂಗೇಶ್ವರ ಕ್ಷೇತ್ರ ಅಭಿವೃದ್ಧಿ ಹೊಂದಿ ಭಕ್ತರಿಗೆ ಧಾರ್ಮಿಕ, ಆಧ್ಯಾತ್ಮಿಕ ಶಕ್ತಿ ಸಿಗುವಂತಾಗಿದೆ. ಜಾತಿ, ಮತ, ಸಂಪ್ರದಾಯ ಇಲ್ಲದೆ ಎಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದು ಅವಶ್ಯ ಎಂದರು.

ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಊರ-ಪರವೂರ ಭಕ್ತರು ಸೇರಿಕೊಂಡು ಶ್ರೀ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ, ವ್ಯವಸ್ಥಿತವಾಗಿ ಬ್ರಹ್ಮಕಲಶೋತ್ಸವ ಆರಂಭಗೊಂಡಿದೆ. ಈ ಮೂಲಕ ಸನಾತನ ಧರ್ಮವನ್ನು ಗಟ್ಟಿಯಾಗಿಸುವ ಕೆಲಸ ನಡೆಯುತ್ತಿದೆ ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ.ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಉಗ್ರಾಣ ಮುಹೂರ್ತ ನೆರವೇರಿಸಿದರು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ತೋರಣ ಮುಹೂರ್ತ ನೆರವೇರಿಸಿದರು. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಕೆ.ಶ್ರೀನಿವಾಸ ಭಟ್ ದೀಪ ಪ್ರಜ್ವಲನೆಗೈದರು. ಶಾಸಕ ಉಮಾನಾಥ ಕೋಟ್ಯಾನ್, ನಿಕಟಪೂರ್ವ ಮೇಯರ್ ಮನೋಜ್ ಕುಮಾರ್, ಮನಪಾ ನಿಕಟಪೂರ್ವ ಸದಸ್ಯರಾದ ಸುಮಂಗಲಾ ರಾವ್, ಗಾಯತ್ರಿ ರಾವ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಕಟೀಲು ಯಕ್ಷಗಾನ ಮಂಡಳಿಯ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಆರ್ಕಿಟೆಕ್ಟ್ ಗೀತಾನಂದ ಅಡಪ ಅಂಡಾಲ, ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಡಿ.ಸುಧಾಕರ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು, ಸಮಿತಿ ಪದಾಧಿಕಾರಿಗಳಾದ ಗಿರಿಜಾತೆ ಆರ್.ಭಂಡಾರಿ, ಹರೀಶ್ ಶೆಟ್ಟಿ, ಸದಾಶಿವ ಶೆಟ್ಟಿ, ಪುರುಷೋತ್ತಮ, ಕಿಶೋರ್ ರೈ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net