

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕೆ.ಮರೀಗೌಡರ ತಲೆದಂಡವಾಗಿದೆ. ಇನ್ನೂ ಇಬ್ಬರು ಅಧಿಕಾರಿಗಳ ತಲೆದಂಡ ಯಾವಾಗ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಡಾದ ಆಯುಕ್ತರಾಗಿದ್ದ ಡಿ.ಬಿ.ನಟೇಶ್, ಜಿ.ಟಿ.ದಿನೇಶ್‌ಕುಮಾರ್ ಅವರನ್ನು ರಕ್ಷಣೆ ಮಾಡಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಇಬ್ಬರನ್ನೂ ವಜಾ ಮಾಡಲೇಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣದ ಸಮಗ್ರ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಮುಡಾದಲ್ಲಿ 50:50 ಅನುಪಾತದಲ್ಲಿ ಪಡೆದ ಸೈಟ್‌ಗಳು ಬೇರೆಯವರಿಗೆ ಪರಭಾರೆ ಆಗುತ್ತಿವೆ. 2020ರಿಂದ 2024ರ ವರೆಗಿನ ಎಲ್ಲ 50:50 ಅನುಪಾತದ ಸೈಟ್ ರದ್ದತಿ ಕೋರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದೇನೆ. ತಾಂತ್ರಿಕ ಸಮಿತಿ ವರದಿ ಜಾರಿಗೆ ಹಾಗೂ ಹಿಂದಿನ ಇಬ್ಬರು ಆಯುಕ್ತರ ವಜಾಕ್ಕೂ ಆಗ್ರಹಿಸಿದ್ದೇನೆ. ಸಿಎಂ ಅವರು ‘ತನಿಖೆ ನಡೆಯುತ್ತಿದೆ. ಮಾರಾಟಕ್ಕೆ ಅವಕಾಶ ಕೊಡಲ್ಲ’ವೆಂದು ಹೇಳಿದ್ದಾರೆ ಎಂದು ತಿಳಿಸಿದರು.
ಕೆ.ಮರೀಗೌಡ ತಲೆದಂಡ ಆಗಿರುವುದು ಸತ್ಯಕ್ಕೆ ಸಿಕ್ಕ ಜಯವಾಗಿದ್ದು, ಮೊದಲ ಹಂತದಲ್ಲಿ ನಮಗೆ ಗೆಲುವು ಸಿಕ್ಕಿದೆ. ಪ್ರಕರಣದಲ್ಲಿ ಸಿಎಂ ಕೂಡ ಭಾಗಿಯಾಗಿದ್ದರೂ ಮನವಿ ಸಲ್ಲಿಸಿರುವೆ. ಅವರಿಂದ ನ್ಯಾಯ ಸಿಗದಿದ್ದರೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವೆ ಎಂದರು.
ನಮ್ಮ ಪ್ರಕಾರ 50:50 ಅನುಪಾತದಡಿ 14,000ಕ್ಕೂ ಹೆಚ್ಚು ನಿವೇಶನಗಳನ್ನು ನೀಡಲಾಗಿದೆ. ಅದೆಲ್ಲವನ್ನು ವಾಪಸ್ ಪಡೆಯಬೇಕು. ತನಿಖೆ ಮುಗಿಸಿ ಅರ್ಹರಿಗೆ ಕೊಡಬೇಕು. 50:50 ಅನುಪಾತದ ನಿವೇಶನಗಳು ಅಷ್ಟೇ ಅಲ್ಲ, ಬದಲಿ ನಿವೇಶನ ಹಂಚಿಕೆಯಲ್ಲೂ ಮುಡಾದಲ್ಲಿ ಅಕ್ರಮ ನಡೆದಿದೆ. ಬೇರೆ ಬೇರೆ ರಾಜಕಾರಣಿಗಳ ಹೆಸರೂ ಕೇಳಿಬರುತ್ತಿದೆ. ತನಿಖೆ ಮಾಡಿ, ತಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.
ಅಕ್ರಮವಾಗಿ ಹಂಚಿಕೆಯಾಗಿರುವ 4,500 ಸೈಟ್‌ಗಳ ಬಗ್ಗೆಯೂ ನಮ್ಮ ಹೋರಾಟ ಇದೆ. ಮೊದಲು 50:50 ಅನುಪಾತದ ನಿವೇಶನ ರದ್ದು ಮಾಡಿದರೆ, ನಂತರ ಅವರ ಪ್ರತಿಕ್ರಿಯೆ ಗೊತ್ತಾಗುತ್ತದೆ ಎಂದರು.