

ತಿಕೋಟಾ: ಮನುಷ್ಯನಿಗೆ ಬರುವ ಸಿರಿ ಸಂಪತ್ತು ಶಾಶ್ವತವಲ್ಲ, ಅಧ್ಯಾತ್ಮ ಜ್ಞಾನವೊಂದೇ ನಿಜವಾದ ಸಂಪತ್ತು. ಸಿರಿ ಬಂದಾಗ ದೇವರು ಮತ್ತು ಧರ್ಮವನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸುಸಲಾದಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ದೇವರು ಕೊಟ್ಟ ಕೊಡುಗೆ ಬೇರಾರು ಕೊಡಲು ಸಾಧ್ಯವಿಲ್ಲ. ನೆಲ, ಕುಡಿಯುವ ನೀರು, ಬೀಸುವ ಗಾಳಿ ದೇವರು ಕೊಟ್ಟ ಅಮೂಲ್ಯ ವರ. ಉದಾತ್ತ ಮಾನವ ಜೀವನದಲ್ಲಿ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸಿಕೊಳ್ಳದಿದ್ದರೆ ಮತ್ತು ಗುರು ಕಾರುಣ್ಯ ಪಡೆಯದೆ ಹೋದರೆ ಜೀವನ ವ್ಯರ್ಥವಾಗುತ್ತದೆ. ದೇವರ ಮೇಲಿನ ನಂಬಿಗೆ ಮತ್ತು ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದ ವಿಕಾಸಕ್ಕೆ ತಂದ ನೀತಿ ನಿಯತ್ತುಗಳ ಪರಿಪಾಲನೆಯೇ ನಿಜವಾದ ಧರ್ಮ ಎಂದರು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಮನುಷ್ಯ ಯಂತ್ರದಂತೆ ದುಡಿದರೂ ಮನಸ್ಸಿಗೆ ಶಾಂತಿ ಇಲ್ಲ. ಬೆಳೆಯುವ ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಐದು ದಿನಗಳವರೆಗೆ ಜೇರಟಗಿಯ ವೇ. ಮಡಿವಾಳೇಶ್ವರ ಶಾಸಿಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಿತು.
ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಜಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು, ಗುಡ್ಡಾಪುರದ ಗುರಪಾದೇಶ್ವರ ಶಿವಾಚಾರ್ಯರು, ಮಹಾರಾಷ್ಟ್ರ ಶಾಸಕ ಗೋಪಿಚಂದ ಪಡೋಳಕರ, ಡಾ. ರವೀಂದ್ರ ಅರಳಿ, ಎ.ಆರ್. ಪಾಟೀಲ, ಚನ್ನಪ್ಪ ಹೊರ್ತಿಕರ, ಉಮದಿ ಬಸವರಾಜ ಹಿರೇಮಠ ಇತರರಿದ್ದರು.
ಭಕ್ತರಿಗೆ ನಿತ್ಯ ಅನ್ನದಾಸೋಹ ಏರ್ಪಡಿಸಲಾಗಿತ್ತು.