ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಲಿಖಿತ ಪರೀಕ್ಷೆ ಯಾವಾಗ?; ಅರ್ಜಿ ಸಲ್ಲಿಸಿ ಕಳೆದಿದೆ ವರ್ಷ..

KSP
Published on
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ರಾಜ್ಯದಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಆರ್ಥಿಕ ಇಲಾಖೆ ಅನುಮತಿಯನ್ನೂ ನೀಡಿರಲಿಲ್ಲ. ಆದರೆ, ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿ ಆಹ್ವಾನಿಸಿ, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು. ವರ್ಷವಾದರೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದಕ್ಕೆ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ‘ವಿಜಯವಾಣಿ ಸಹಾಯವಾಣಿ’ಗೆ ಕರೆಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ನಮ್ಮ ವರದಿಗಾರ ಮರಿದೇವ ಹೂಗಾರ ಸಿದ್ಧಪಡಿಸಿರುವ ವರದಿ ಇಲ್ಲಿದೆ.

ವಿಜಯವಾಣಿ ವಿಶೇಷ ಹುಬ್ಬಳ್ಳಿ: ಪೊಲೀಸ್ ಸಬ್ ಇನ್​ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಒಂದು ವರ್ಷ ಆಗಿದೆ. ಆದರೆ, ಇದುವರೆಗೆ ಲಿಖಿತ ಪರೀಕ್ಷೆ ನಡೆಸದೇ ಇರುವುದರಿಂದ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್​ಪಿ) 411 ಪಿಎಸ್​ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. 2021ರ ಏಪ್ರಿಲ್ 1ರಿಂದ ಮೇ 3ರವರೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಆಗಸ್ಟ್​ನಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನೂ ಮುಗಿಸಿದೆ. ಆದರೆ, ಇದುವರೆಗೆ ಲಿಖಿತ ಪರೀಕ್ಷೆ ನಡೆಸಿಲ್ಲ. ವಿಳಂಬಕ್ಕೆ ಕಾರಣವನ್ನೂ ಹೇಳುತ್ತಿಲ್ಲ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 411 ಪಿಎಸ್​ಐ ಹುದ್ದೆಗಳ ಪೈಕಿ ಅನುಚ್ಛೇದ 371 ಜೆ ಮೀಸಲಾತಿ (26ಹುದ್ದೆ), ಮಿಕ್ಕುಳಿದ ವೃಂದ (376 ಹುದ್ದೆ), 371ಜೆ ಒಂದು ಹುದ್ದೆ ಸೇರಿ 9 ಕ್ರೀಡಾಪಟುಗಳಿಗೆ (ಶೇ. 2 ಮೀಸಲಾತಿ) ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು. ಮೊದಲೆಲ್ಲ ನೇಮಕಾತಿ ಪ್ರಕ್ರಿಯೆ 5 ತಿಂಗಳೊಳಗೆ ಮುಗಿಸುತ್ತಿದ್ದರು. ಈಗ ವರ್ಷ ಆಗುತ್ತಾ ಬಂದರೂ ಲಿಖಿತ ಪರೀಕ್ಷೆ ನಡೆಸಿಲ್ಲ. ಜನವರಿ 30 ಮತ್ತು ಫೆಬ್ರವರಿ ಕೊನೆಯ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಕೆಎಸ್​ಪಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿತ್ತಾದರೂ ಇನ್ನೂ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ.

ಅರ್ಜಿ ಸಲ್ಲಿಸಿ ಒಂದು ವರ್ಷ ಆಗುತ್ತ ಬಂದಿದೆ. ಇದುವರೆಗೆ ಲಿಖಿತ ಪರೀಕ್ಷೆ ನಡೆಸಿಲ್ಲ. ಪಿಎಸ್​ಐ ಆಗಬೇಕೆಂಬ ಕನಸು ನನಸಾಗುತ್ತಿಲ್ಲ. ಒಂದು ಪರೀಕ್ಷೆ ನಡೆಸಲು ಒಂದು ವರ್ಷ ತೆಗೆದುಕೊಳ್ಳಲಾಗುತ್ತಿದೆ. ಬೇರೆ ಹುದ್ದೆಗಳಿಗೆ ಪರೀಕ್ಷೆ ಬರೆಯಲೂ ಮನಸ್ಸು ಬರುತ್ತಿಲ್ಲ. | ನೊಂದ ಅಭ್ಯರ್ಥಿಗಳು

ವಿಳಂಬವೇಕೆ?: 411 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಕ್ಕೆ ಮುನ್ನ 2021ರ ಜನವರಿಯಲ್ಲಿ 556 ಪಿಎಸ್​ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರ ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆಗಳು ಮುಗಿದಿವೆ. ಸರಿಯಾಗಿ ಪರೀಕ್ಷೆಗಳು ನಡೆದಿಲ್ಲ, ಅರ್ಹರು ಹುದ್ದೆಗಳಿಗೆ ಆಯ್ಕೆಯಾಗಿಲ್ಲ. 371 ಜೆ ಮೀಸಲಾತಿ ಜಾರಿ ಸಮರ್ಪಕವಾಗಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, 411 ಪಿಎಸ್​ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವೇನೆಂದು ಇದುವರೆಗೂ ಸಚಿವರು ಹೇಳುತ್ತಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net