

ಶಾಂತಮೂರ್ತಿ ದೇವನಹಳ್ಳಿ
ಮೈಸೂರು ಸಂಸ್ಥಾನದ ಕಾಲದಲ್ಲಿ ನಿರ್ಮಾಣವಾಗಿ 2012 ರವರೆಗೂ ತಾಲೂಕಿನ ಆಡಳಿತದ ಶಕ್ತಿ ಕೇಂದ್ರವಾಗಿದ್ದ ತಾಲೂಕು ಕಚೇರಿ ಹಳೆಯ ಕಟ್ಟಡ ಪ್ರಸ್ತುತ ಅಕ್ರಮ ಚಟುವಟಿಕೆ ತಾಣವಾಗಿ ರೂಪುಗೊಂಡಿದೆ. ತ್ಯಾಜ್ಯ ವಿಲೇವಾರಿ, ಮಲಮೂತ್ರ ವಿಸರ್ಜನೆ ತಾಣವಾಗಿ ಬದಲಾಗಿದೆ.
ಕಸ ವಿಲೇವಾರಿ ತಾಣ: 1880ರಲ್ಲಿ ಭವ್ಯವಾದ ಹೆಂಚು ಹೊದಿಕೆಯ ಅಠಾರ ಕಚೇರಿ ಮಾದರಿಯಲ್ಲಿ ತಾಲೂಕು ಕಚೇರಿ ನಿರ್ಮಾಣವಾಗಿತ್ತು. ಇದರ ಉತ್ತರ ಪಾರ್ಶ್ವದಲ್ಲಿ ಒಂದು ಭಾಗವನ್ನು ಅನಿವಾಸಿ ಭಾರತೀಯ ರೊನಾಲ್ಡ್ ಕೊಲಾಸೋ 18 ವರ್ಷದ ಹಿಂದೆ ನವೀಕರಿಸಿಕೊಟ್ಟಿದ್ದರು. ನಂತರ ಅರಣ್ಯ ಇಲಾಖೆ ಕಟ್ಟಡವಿದ್ದ ಆವರಣದಲ್ಲಿ ಮಿನಿವಿಧಾನಸೌಧ ನಿರ್ಮಾಣವಾಗಿ 2011ರಲ್ಲಿ ಇಲ್ಲಿನ ಕಚೇರಿ ಸ್ಥಳಾಂತರಗೊಂಡಿತ್ತು. ತರುವಾಯ ಇದೇ ಉತ್ತರ ಪಾರ್ಶ್ವದ ನವೀಕರಿಸಿದ ಕೋಣೆಯಲ್ಲಿ ಸಿಡಿಪಿಒ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಹಳೆಯ ಕಟ್ಟಡದ ಬಲಭಾಗದಲ್ಲಿ ಎಸ್‌ಸಿ, ಎಸ್ಟಿ ಅಭಿವೃದ್ಧಿ ನಿಗಮದ ಕಚೇರಿ ಇದ್ದು, ಕಸದ ಗುಂಡಿಯ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಿದೆ. ಇದರ ಜತೆಗೆ ಕಂದಾಯ ನಿರೀಕ್ಷಕರ ಕೋಣೆಯೂ ಇದೆ.
ಅವ್ಯವಸ್ಥೆಯ ಆಗರ: ಇಲ್ಲಿ ಸ್ವಚ್ಛತಾ ಕಾರ್ಯ ಮರೀಚಿಕೆಯಾಗಿದೆ. ಮಳೆಗಾಲದಲ್ಲಿ ಈ ಭಾಗ ಕೆರೆಯಂತಾಗುತ್ತದೆ. ಹೊಸ ಕಟ್ಟಡಕ್ಕೆ ತಾಲೂಕು ಕಚೇರಿ ಸ್ಥಳಾಂತರವಾದ ಬಳಿಕ ಈ ಕಟ್ಟಡವನ್ನು ಕಡೆಗಣಿಸಲಾಗಿದೆ. ಹೆಂಚುಗಳು ಒಡೆದು ಹಲವು ಕೊಠಡಿಗಳ ಗೋಡೆ ಕುಸಿದು ಭೂತಬಂಗಲೆಯಂತಾಗಿದೆ.
ವಾರ್ತಾ ಇಲಾಖೆಗೆ ಜಾಗ ಕೊಡಿ: ವಾರ್ತಾ ಇಲಾಖೆಯ ಜಿಲ್ಲಾ ಕಚೇರಿಗೆ ಜಿಲ್ಲಾಡಳಿತ ಭವನದಲ್ಲೇ ಸೂಕ್ತ ಜಾಗವಿಲ್ಲ ಎನ್ನಲಾಗಿದ್ದು, ಜಿಲ್ಲಾ ವಾರ್ತಾ ಇಲಾಖೆ ಬೆಂಗಳೂರು ನಗರದಲ್ಲೇ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಸಂವಹನ ಮಾಹಿತಿ ಹಂಚಿಕೆಗೆ ಅಧಿಕಾರಿಗಳನ್ನು ಸಂಪರ್ಕಿಸಲು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ದೇವನಹಳ್ಳಿಯ ಇದೇ ಕಚೇರಿಯಲ್ಲಿ ಸ್ಥಳಾವಕಾಶ ಮಾಡಿಕೊಡಬಹುದು.
2010-2011 ರವರೆಗೂ ಕಾರ್ಯಚಟುವಟಿಕೆ ಕೇಂದ್ರಸ್ಥಾನವಾಗಿದ್ದ ಹಳೆಯ ತಾಲೂಕು ಕಚೇರಿಯನ್ನು ಕಡೆಗಣಿಸಿದ್ದರಿಂದ ಅವ್ಯವಸ್ಥೆ ತಾಣವಾಗಿ ಬದಲಾಗಿದೆ. ಇದನ್ನು ಹಳೆಯ ಶೈಲಿಗೆ ಧಕ್ಕೆ ಬರದಂತೆ ಅದೇ ಮಾದರಿಯಲ್ಲಿ ನವೀಕರಿಸಿ ದೇವನಹಳ್ಳಿಯಲ್ಲಿ ಮತ್ತಷ್ಟು ಸರ್ಕಾರಿ ಕಚೇರಿಗೆ ಬಳಸಿಕೊಳ್ಳಬಹುದು ಎಂಬುದು ಮಾನವಹಕ್ಕುಗಳ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಎ.ಎಂ.ನಾರಾಯಣಸ್ವಾಮಿ ಅಭಿಪ್ರಾಯವಾಗಿದೆ.
ಇಷ್ಟು ಕೊಳಕಿನಿಂದ ಕೂಡಿರುವ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ನೀಡಿ ಆ ವರ್ಗವನ್ನು ಅವಮಾನ ಮಾಡಿದಂತಾಗಿದೆ. ಕೂಡಲೇ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಈ ಜಾಗ ಸ್ವಚ್ಛಗೊಳಿಸಿ ಕಟ್ಟಡ ಉಳಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ದೇವನಹಳ್ಳಿ ತಾಲೂಕು ಹಲವು ಇತಿಹಾಸಗಳಿಗೆ ಸಾಕ್ಷಿಯಾಗಿದೆ. ಇತಿಹಾಸ ಸಾರುವ ಹಲವು ಶಿಲಾಶಾಸನಗಳು, ವೀರಗಲ್ಲು ಮಾಸ್ತಿಗಲ್ಲುಗಳು ದೊರೆತಿವೆ. 140 ವರ್ಷ ಹಳೆಯದಾದ ತಾಲೂಕು ಕಚೇರಿ ತಿಪ್ಪೆಗುಂಡಿಗಿಂತಲೂ ಕಡೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ನೀಡಬೇಕು. ಬಿಟ್ಟಸಂದ್ರ ಗುರುಸಿದ್ದಯ ಇತಿಹಾಸ ಸಂಶೋಧಕ