

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ಉದ್ಘಾಟಿಸಿದ್ದ ಶಿವಮೊಗ್ಗ ಏರ್‌ಪೋರ್ಟ್ ಆ.11ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗುವುದು ಬಹುತೇಕ ಖಚಿತವಾಗಿದೆ. ವಿಮಾನಯಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಟಿಕೆಟ್ ಬುಕ್ಕಿಂಗ್ ಶುರು ಮಾಡಲು ದಿನಾಂಕವನ್ನೂ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಶನಿವಾರ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಇರಬಹುದಾದ ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸುವುದು, ಆ.11ರಂದು ಏರ್‌ಪೋರ್ಟ್‌ಗೆ ಆಗಮಿಸುವ ಅತಿ ಗಣ್ಯರು, ಜನಪ್ರತಿನಿಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು.
ಆ.11ರಿಂದ ವಿಮಾನ ಕಾರ್ಯಾಚರಣೆಗೆ ಅಗತ್ಯ ಎಲ್ಲ ಸಿದ್ಧತೆಗಳನ್ನು ಏರ್‌ಪೋರ್ಟ್‌ನಲ್ಲಿ ಮಾಡಿಕೊಳ್ಳಬೇಕು. ವಿಮಾನಯಾನ ಒದಗಿಸಲಿರುವ ಇಂಡಿಗೋ ಕಂಪನಿ ಸಿಬ್ಬಂದಿಯೊಂದಿಗೆ ಚರ್ಚಿಸಿ ಅವರು ವೀಕ್ಷಣೆ ಮಾಡಿರುವ ಸಂದರ್ಭದಲ್ಲಿ ಕಂಡು ಬಂದಿರುವ ಸಣ್ಣಪುಟ್ಟ ಸಮಸ್ಯೆಗಳು, ಅವರು ಬಯಸಿರುವ ಹೆಚ್ಚುವರಿ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದರು.
ಶಿವಮೊಗ್ಗದಲ್ಲಿ ಆಗಸ್ಟ್ 11ರಿಂದ ಕಾರ್ಯಾಚರಣೆ ಮಾಡಲಿರುವ ಎಟಿಆರ್-72 ಮಾದರಿಯ ವಿಮಾನ 78 ಆಸನಗಳನ್ನು ಒಳಗೊಂಡಿರುತ್ತದೆ. ಈಗಿನ ನಿರ್ಧಾರದಂತೆ ಆರಂಭದಲ್ಲಿ ಇದು ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸಲಿದೆ. ಇದಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಬೇಕಿದೆ. ಲೋಕೋಪಯೋಗಿ ಅಧಿಕಾರಿಗಳು ಹಾಗೂ ಶಿವಮೊಗ್ಗ ಏರ್‌ಪೋರ್ಟ್ ನಿರ್ದೇಶಕರು ಈ ಬಗ್ಗೆ ನಿಗಾವಹಿಸಬೇಕು ಎಂದು ಡಾ.ಆರ್.ಸೆಲ್ವಮಣಿ ಹೇಳಿದರು.
ಶಿವಮೊಗ್ಗ ಏರ್‌ಪೋರ್ಟ್ ನಿರ್ದೇಶಕ ಕ್ಯಾಪ್ಟನ್ ಶಮಂತ್, ಪ್ರಭಾರ ಅಪರ ಜಿಲ್ಲಾಧಿಕಾರಿ ಆರ್.ಮೇಘನಾ, ಶಿವಮೊಗ್ಗ ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಸಂಪತ್ ಕುಮಾರ್ ಪಿಂಗಳೆ, ಪೊಲೀಸ್ ಪಡೆ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್, ಗುತ್ತಿಗೆದಾರ ಇಬ್ರಾಹಿಂ ಶರೀಫ್ ಮತ್ತಿತರರಿದ್ದರು.
ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಲು ಇಂಡಿಗೋ ಸಂಸ್ಥೆ ಜು.20 ರಿಂದ ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿ ವಲಯದ ಮುಖ್ಯಸ್ಥ ಮನೋಜ್ ಪ್ರಭು ಇದನ್ನು ಖಚಿತಪಡಿಸಿದ್ದಾರೆ. ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್‌ಸೈಟ್ WWW.goindigo.in ಹಾಗೂ ಅಥವಾ ಮೇಕ್ ಮೈ ಟ್ರಿಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.