ಬಾಲಚಂದ್ರ ಜಾರಕಿಹೊಳಿ ಸೇವೆ ಶ್ಲಾಘನೀಯ

1
Published on


ಗೋಕಾಕ: ಜನರು ಕಷ್ಟದಲ್ಲಿರುವಾಗ ಅವರಿಗೆ ಸಹಾಯ ಹಸ್ತ ನೀಡುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ ಎಂದು ವೈದ್ಯ ಡಾ. ಆರ್.ಎಸ್. ಬೆಣಚಿನಮರಡಿ ಶ್ಲಾಘಿಸಿದ್ದಾರೆ. ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿದ ಕರೊನಾ ರೋಗಿಗಳಿಗೆ ದಿನಬಳಕೆಯ ಮತ್ತು ಮೆಡಿಕಲ್ ಕಿಟ್ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕರೊನಾ ರೋಗಕ್ಕೆ ಜನರು ಭಯಭೀತರಾಗಿ ಬದುಕುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಅವರಿಗೆ ಕಷ್ಟಗಳು ಬಂದು ಹೋಗಿವೆ. ಲಾಕ್‌ಡೌನ್‌ನಂತಹ ಸಂದರ್ಭದಲ್ಲಿಯೂ ಅರಬಾವಿ ಕ್ಷೇತ್ರದ ಪ್ರತಿ ಕುಟುಂಬಗಳಿಗೂ ಆಹಾರ ಧಾನ್ಯದ ಕಿಟ್‌ಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ವಿತರಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಬಾಲಚಂದ್ರ ಜಾರಕಿಹೊಳಿ ಅವರು ಸಾಕ್ಷಿಯಾಗಿ ಪ್ರತಿಯೊಬ್ಬರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಸಂಭವಿಸಿದ ಪ್ರವಾಹದಿಂದಾಗಿ ಜನರು ಮನೆಗಳನ್ನು ತೊರೆದಾಗ ಅವರ ಬದುಕಿಗೆ ಆಸರೆಯಾಗಿ ನಿಂತು ಆಪದ್ಭಾಂಧವರಾದರು. ಈಗ ಕರೊನಾ ಸೋಂಕಿತರಿಗೆ ದಿನಬಳಕೆ ಮತ್ತು ಮೆಡಿಕಲ್ ಕಿಟ್‌ಗಳನ್ನು ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದರು. ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ಮೂಡಲಗಿ ತಹಸೀಲ್ದಾರ್ ದಿಲಶಾದ್ ಮಹಾತ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೊನಾ ಸೋಂಕಿತರಿಗೆ ಸಾಕಷ್ಟು ಅನುಕೂಲ ಒದಗಿಸಿಕೊಡುತ್ತಿದ್ದಾರೆ.

ಆರೋಗ್ಯ ಇಲಾಖೆಯ ಮೂಲಕ ಸೋಂಕಿತರಿಗೆ ಕಿಟ್‌ಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ರೋಗಿಗಳಿಗೆ 10 ದಿನಕ್ಕೆ ಬೇಕಾಗುವ ದಿನಬಳಕೆ ಮತ್ತು ಔಷಧೋಪಚಾರದ ಸಾಮಗ್ರಿಗಳಿವೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ಜಿಂಗಿ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ್, ಗೋಕಾಕ ಸಿಪಿಐ ಗೋಪಾಲ ರಾಠೋಡ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪಿಎಸ್‌ಐ ಖಿಲಾರಿ, ನಿಂಗಪ್ಪ ಕುರಬೇಟ, ದಾಸಪ್ಪ ನಾಯಿಕ, ಲಕ್ಕಪ್ಪ ಲೋಕುರಿ, ಚನ್ನಮಲ್ಲಿಕಾರ್ಜುನ ಯಕ್ಸಂಬಿ, ಮಿರ್ಜಾ ನಾಯ್ಕ ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಕರೊನಾ ಸೋಂಕಿತರಿಗೆ ದಿನಬಳಕೆ ಮತ್ತು ಮೆಡಿಕಲ್ ಕಿಟ್‌ಗಳನ್ನು ಗೋಕಾಕ ಮತ್ತು ಮೂಡಲಗಿ ಸರ್ಕಾರಿ ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net