ಮನೆಗೆ ಹೊಕ್ಕು ಕದ್ದರು, ಕಾರನ್ನೂ ಕದ್ದೊಯ್ದರು; ಕುಟುಂಬಸಮೇತ ಹೊರರಾಜ್ಯದಲ್ಲಿದ್ದ ಮಾಲೀಕನಿಗೆ ಸ್ನೇಹಿತನಿಂದ ವಿಷ್ಯ ಗೊತ್ತಾಯ್ತು..

Theft
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಖಾಸಗಿ ಕಂಪನಿ ನೌಕರನ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು, ಕಾರು ಸಮೇತ ಪರಾರಿಯಾಗಿದ್ದಾರೆ. ಇಸ್ರೋ ಲೇಔಟ್ ಬಳಿಯ ವಿಕ್ರಮ್​ ನಗರದ ರಾಮ್‌ನಾರಾಯಣ ಮಾಳ್ವಿ ಎಂಬುವರು ದೂರು ನೀಡಿದ್ದಾರೆ.

ಖಾಸಗಿ ಕಂಪನಿ ನೌಕರರಾಗಿರುವ ರಾಮ್‌ನಾರಾಯಣ್, ಆ.6ರಂದು ಕುಟುಂಬಸಮೇತ ಮಧ್ಯಪ್ರದೇಶದ ಭೂಪಾಲ್‌ಗೆ ಹೋಗಿದ್ದರು. ಆಗಸ್ಟ್ 11ರ ಬೆಳಗ್ಗೆ ಅವರ ಸ್ನೇಹಿತ ಕರೆ ಮಾಡಿ ಮನೆ ಕಳ್ಳತನ ಆಗಿರುವ ವಿಷಯ ಮುಟ್ಟಿಸಿದ್ದರು. ಬಳಿಕ ರಾಮ್​ನಾರಾಯಣ್​ ಅಲ್ಲಿಂದ ಹೊರಟು ಬೆಂಗಳೂರಿಗೆ ಬಂದು ನೋಡಿದಾಗ ಮನೆಯ ಮುಖ್ಯದ್ವಾರ ತೆರೆದು ಕಳ್ಳರು ಒಳಗೆ ನುಗ್ಗಿ ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಕಾಂಪಾಂಡ್​ನಲ್ಲಿದ್ದ ಟಾಟಾ ಟಿಯಾಗೊ ಕಾರು ಓಡಿಸಿಕೊಂಡು ಹೋಗಿದ್ದಾರೆ.

ಈ ಕಳ್ಳರು ಅಂದೇ ಪಕ್ಕದಲ್ಲಿದ್ದ ಸ್ಟುಡಿಯೋಗೆ ನುಗ್ಗಿ ದುಬಾರಿ ಕ್ಯಾಮರಾ ಸಹ ಕಳ್ಳತನ ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಮ್​ನಾರಾಯನ್​ ಕೊಟ್ಟ ದೂರಿನ ಮೇರೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net