

ಗಣೇಶ್ ಮಾವಂಜಿ ಸುಳ್ಯ
ತೋಟದಲ್ಲಿ ಬೆಳೆ ನಳನಳಿಸುತ್ತಿರುವಾಗ ಕಾಡಾನೆಗಳು ನುಗ್ಗಿ ಬೆಳೆ ನಾಶವಾಯಿತೆಂದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಬೇಸರ. ಸಹಾಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬರಬಹುದೆಂಬ ನಿರೀಕ್ಷೆ ಹುಸಿಯಾಗುವುದೇ ಹೆಚ್ಚು. ಹೀಗಾಗಿ ಸುಳ್ಯದ ಕಾಡಂಚಿನ ರೈತರು ಆನೆ ಓಡಿಸಲು ರೈತರೇ ವಾಟ್ಸ್ಯಾಪ್ ಗ್ರೂಪ್ ರಚಿಸಿ ಕೊಡುಕೊಳ್ಳುವಿಕೆಯ ಸೂತ್ರದಂತೆ ಸಹಕಾರ ನೀಡುತ್ತಿದ್ದಾರೆ. ಆನೆಗಳ ಹಿಂಡು ಯಾವ ಭಾಗದಲ್ಲಿದೆ? ಯಾವ ಭಾಗಕ್ಕೆ ಈ ದಿನ ಬರಬಹುದು ಎಂಬುದನ್ನು ‘ಜಾಗೃತ ರೈತರ’ ಗುಂಪಿನಲ್ಲಿ ಚರ್ಚಿಸಿ ಎಚ್ಚರಿಕೆ ವಹಿಸುತ್ತಾರೆ.
ಮಂಡೆಕೋಲು ಗ್ರಾಮದ ಕೇನಾಜೆ ಬಳಿಯ ಕುಸುಮಾಧರ ಮಾವಂಜಿ ಎಂಬುವರ ತೋಟವನ್ನು ತಿಂಗಳ ಹಿಂದೆ ಬಂದ ಒಂಟಿ ಆನೆ ಹಾನಿ ಮಾಡಿತ್ತು. ಒಂದು ವೇಳೆ ಇನ್ನೊಂದು ಭಾಗದ ಜನರು ಮೊದಲೇ ಆನೆಗಳ ಇರುವಿಕೆಯ ಸುಳಿವು ನೀಡಿದ್ದರೆ ಜಾಗರೂಕತೆ ವಹಿಸಬಹುದಿತ್ತು ಎಂಬುದನ್ನು ಮನಗಂಡ ಕುಸುಮಾಧರ್ ತಮ್ಮ ಸುತ್ತಮುತ್ತಲಿನ ಅರಣ್ಯ ಸರಹದ್ದಿನಲ್ಲಿ ಮನೆಯಿರುವ ಕೆಲವು ಸದಸ್ಯರಿಗೆ ತಿಳಿಸಿ ವಾಟ್ಸಾಪ್ ಗ್ರೂಪ್ ರಚಿಸಿದರು. ಹೀಗೆ ತಿಂಗಳ ಹಿಂದೆ ಹುಟ್ಟಿಕೊಂಡ ಈ ಗ್ರೂಪಿನಲ್ಲಿ ಈಗ ಐವತ್ತಕ್ಕೂ ಅಧಿಕ ಸದಸ್ಯರಿದ್ದಾರೆ
ತಕ್ಷಣ ಸಿಗುತ್ತದೆ ಸೂಚನೆ: ಈ ಗ್ರೂಪ್ ರಚನೆಯಾದ ಬಳಿಕ ಒಂದು ಭಾಗಕ್ಕೆ ಆನೆಗಳ ಹಿಂಡು ಬರುವ ಸುಳಿವು ಸಿಕ್ಕರೆ ಮತ್ತೊಂದು ಭಾಗದ ಜನರಿಗೆ ಸೂಚನೆ ದೊರೆಯುತ್ತದೆ. ಸದಸ್ಯರು ಆನೆ ಓಡಿಸಲು ಅಗತ್ಯ ಸಿದ್ಧತೆಯೊಂದಿಗೆ ಆನೆಗಳ ಹಿಂಡು ಇರುವ ತೋಟದ ಬಳಿ ಸೇರುತ್ತಾರೆ. ಬಳಿಕ ಬೆಂಕಿ ಹಾಕಿ, ಪಟಾಕಿ ಸಿಡಿಸಿ ಜತೆಗೆ ಬೊಬ್ಬೆ ಹೊಡೆದು ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಈ ಪ್ರಯೋಗ ಆನೆ ದಾಳಿ ತಡೆಯುವಲ್ಲಿ ಪೂರ್ಣ ಯಶಸ್ಸು ಕಾಣದಿದ್ದರೂ, ಒಂದು ಕಡೆಯ ತೋಟದಿಂದ ಮತ್ತೊಂದು ಕಡೆಯ ತೋಟಕ್ಕೆ ಆನೆ ಬರುವುದನ್ನು ತಪ್ಪಿಸಲು ಸಹಕಾರಿ ಎನ್ನುತ್ತಾರೆ ಈ ಗ್ರೂಪಿನ ಸದಸ್ಯರು.
ಕಾಡಂಚಿನ ಗ್ರಾಮದಲ್ಲಿ ಕಾಟ ಹೆಚ್ಚು: ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮಂಡೆಕೋಲು ಗ್ರಾಮದ ಹೆಚ್ಚಿನ ಮನೆಗಳು ಅರಣ್ಯದೊಂದಿಗೆ ನಿಕಟ ಸಂಪರ್ಕ ಹೊಂದಿವೆ. ರೈತರ ಕೃಷಿ ಭೂಮಿಯೂ ಅರಣ್ಯದ ಆಸುಪಾಸಿನಲ್ಲೇ ಇರುವುದರಿಂದ ಕಾಡುಪ್ರಾಣಿಗಳ ಹಾವಳಿ ಇಲ್ಲಿ ಅತ್ಯಧಿಕ. ಅದರಲ್ಲೂ ಕಾಡಾನೆಗಳ ಉಪಟಳ ಹೆಚ್ಚು. ಮೊದಲು ಆನೆಗಳ ಹಾವಳಿ ಬೊಳುಗಲ್ಲು, ಚಾಕೊಟೆ, ಕುಂಡಪಾರೆ, ಪೆರ್ದೋಡಿ, ಪಾತಿಕಲ್ಲಿನ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದರೆ, ಇತ್ತೀಚೆಗೆ ಉಗ್ರಾಣಿಮನೆ, ಮಂಡೆಕೋಲು ಬೈಲು, ಕಲ್ಲಡ್ಕ, ಕನ್ಯಾನ, ಮುರೂರು, ಕಜಲ, ಕಾಪಿನಡ್ಕ, ದೇವರಗುಂಡ ಮೊದಲಾದ ಕಡೆಗಳಿಗೂ ವಿಸ್ತರಣೆಯಾಗಿದೆ.
ಎರಡು ದಿನಗಳ ಹಿಂದೆ ಮುರೂರು ಭಾಗದಲ್ಲಿ ರೈತರ ತೋಟಕ್ಕೆ ಆನೆಗಳ ಹಿಂಡು ನುಗ್ಗಿತ್ತು. ಈ ಬಗ್ಗೆ ಗ್ರೂಪ್‌ನಲ್ಲಿ ತಿಳಿಸಿದಾಗ ಸದಸ್ಯರು ಸೇರಿ ಆನೆಯನ್ನು ಕಾಡಿನತ್ತ ಓಡಿಸಲು ಸಫಲರಾದರು. ಬಳಿಕ ಅದೇ ಹಿಂಡು ಕಾಪಿನಡ್ಕದತ್ತ ಸಾಗಲು ಪ್ರಯತ್ನಿಸಿತು. ಅಲ್ಲಿನ ಜನರು ಎಚ್ಚೆತ್ತುಕೊಂಡ ಕಾರಣ, ಆನೆ ದಾಳಿಯಿಂದ ಕೃಷಿಗೆ ಹೆಚ್ಚು ಹಾನಿಯಾಗಲಿಲ್ಲ. - ಕುಸುಮಾಧರ ಮಾವಜಿ ಸ್ಥಳೀಯ ಕೃಷಿಕ ಪರಸ್ಪರ ಸಹಾಯಕ್ಕಾಗಿ ಈ ರೀತಿ ಗ್ರೂಪ್ ರಚಿಸಿ ಕೃಷಿಗೆ ಆನೆ ಉಪಟಳ ತಡೆಯಲು ಪ್ರಯತ್ನಿಸುವುದು ಉತ್ತಮ. ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಈ ಗ್ರೂಪಿಗೆ ಸೇರಿಸಿಕೊಂಡರೆ ಇಲಾಖೆಗೂ ಮಾಹಿತಿ ರವಾನೆಯಾಗುತ್ತದೆ. ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿ ಆಗುತ್ತದೆ.ಗಿರೀಶ್ ಆರ್.ರೇಂಜರ್, ಸುಳ್ಯ ವಲಯ