

ಮಡಿಕೇರಿ:
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮದ ಮುನ್ಸೂಚನೆ ನೀಡಿದೆ. ಕೊಡಗಿನಲ್ಲಿ ಇಬ್ಬರು ಪ್ರಮುಖ ರಾಜಕೀಯ ವ್ಯಕ್ತಿಗಳಿಗೆ ನೊಟೀಸ್ ಜಾರಿ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಎಚ್ಚೆತ್ತುಕೊಂಡಿದ್ದಾರೆ. ಗುರುವಾರ ಸಂಜೆಯಿಂದಲೇ ಸಾರ್ವಜನಿಕ ವಾಟ್ಸಪ್ ಗ್ರೂಪ್‌ಗಳು ’ಅಡ್ಮಿನ್ ಓನ್ಲಿ.’ ಗ್ರೂಪ್‌ಗಳಾಗಿ ಬದಲಾಗಿದೆ. ಮತದಾನ ಮುಗಿಯುವ ತನಕವೂ ಹೀಗೆಯೇ ಮುಂದುವರಿಸಲು ಗ್ರೂಪ್ ಅಡ್ಮಿನ್‌ಗಳು ನಿರ್ಧಾರ ತೆಗೆದುಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬರಲಿದ್ದು, ಉಲ್ಲಂಘನೆ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಬುಧವಾರ (ಮಾ.೨೯) ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೂ ಗುರುವಾರ (ಮಾ. ೩೦) ರಾಮನವಮಿ ಸಂದರ್ಭದಲ್ಲಿ ಬಹುತೇಕ ರಾಜಕೀಯ ಪಕ್ಷಗಳ ನಾಯಕರು ನೀತಿ ಸಂಹಿತೆ ಜಾರಿಯಾಗಿರುವುದನ್ನು ಮರೆತು ತಮ್ಮ ತಮ್ಮ ಪಕ್ಷಗಳ ಚಿಹ್ನೆಗಳೊಂದಿಗೆ ಸಾರ್ವಜನಿಕರಿಗೆ ಹಬ್ಬದ ಶುಭಾಶಯ ಕೋರುವ ಸಂದೇಶವನ್ನು ಸಾರ್ವಜನಿಕ ವಾಟ್ಸಪ್ ಗ್ರೂಪ್‌ಗಳಲ್ಲಿ ಎಲ್ಲೆಂದರಲ್ಲಿ ಹರಿಯಬಿಟ್ಟಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆ-೨೦೨೩ರ ವೇಳಾಪಟ್ಟಿ ಪ್ರಕಾರ ಮಾ. ೨೯ರಿಂದಲೇ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಬಂದಿದೆ. ಈ ಸಂದರ್ಭ ಪತ್ರಿಕೆ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಇನ್ನಿತ ಮಾಧ್ಯಮಗಳಲ್ಲಿ ರಾಜಕೀಯ ಪ್ರಚಾರ ಮಾಡಬೇಕಾದರೆ, ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದರೆ ಜಿಲ್ಲಾ ಮಾಧ್ಯಮ ಪ್ರಾಮಾಣಿಕರಣ ಮತ್ತು ವಿಚಕ್ಷಣ ಸಮಿತಿಯಿಂದ ಪೂರ್ವ ಅನುಮತಿ ಪಡೆಯಬೇಕು. ಆದರೆ ರಾಮನವಮಿ ಶುಭಾಶಯ ಕೋರುವ ಸಂದರ್ಭ ಯಾವುದೇ ಮುಖಂಡರು ಯಾವ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ. ಹಾಗಾಗಿ ಇದನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿರುವ ಚುನಾವಣಾ ಆಯೋಗ ಇಬ್ಬರು ಪ್ರಮುಖ ರಾಜಕೀಯ ನಾಯಕರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದೆ. ನೊಟೀಸ್ ತಲುಪಿದ ೨೪ ಗಂಟೆಯೊಳಗೆ ಖುದ್ದು ಲಿಖಿತ ಸಮಜಾಯಿಷಿಕೆ ನೀಡಲು ಕೂಡ ಸೂಚಿಸಿದ್ದು, ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಸಾಮಾನ್ಯವಾಗಿ ಪ್ರತಿದಿನವೂ ಬಿಸಿ ಬಿಸಿ ಚರ್ಚೆಗಳಿಗೆ ವೇದಿಕೆ ಒದಗಿಸುವ ಸಾರ್ವಜನಿಕ ವಾಟ್ಸಪ್ ಗ್ರೂಪ್‌ಗಳ ಅಡ್ಮಿನ್‌ಗಳು ಬುದ್ಧಿವಂತಿಕೆ ಉಪಯೋಗಿಸಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಂದೇ ತಮ್ಮ ಗ್ರೂಪ್‌ಗಳಲ್ಲಿ ಬೇರೆಯವರ ಸಂದೇಶಗಳಿಗೆ ನಿರ್ಬಂಧ ಹಾಕಿಬಿಟ್ಟಿದ್ದಾರೆ. ಇದೀಗ ನೀತಿ ಸಂಹಿತೆ ಜಾರಿಗೆ ಬಂದ ಮೊದಲ ದಿನವೇ ಇಬ್ಬರು ರಾಜಕೀಯ ವ್ಯಕ್ತಿಗಳಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿರುವುದು ಇತರ ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೂ ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ. ಹಾಗಾಗಿ ಯಾವುದೇ ತಲೆನೋವು ಬೇಡ ಎಂದು ಸಾರ್ವಜನಿಕ ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳು ತಮ್ಮ ಗ್ರೂಪ್‌ಗಳನ್ನು ’ಅಡ್ಮಿನ್ ಓನ್ಲಿ’ ಮಾಡಿಕೊಂಡಿದ್ದಾರೆ.
ಪತ್ರಿಕೆಗಳು, ದೃಶ್ಯಮಾಧ್ಯಮಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದೆ. ಈ ಮಾಧ್ಯಮಗಳಲ್ಲಿ ಬಂದು ಹೋಗುವ ವಿಷಯಗಳನ್ನು ಗಮನಿಸುವುದಕ್ಕಾಗಿಯೇ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಬಹುತೇಕ ಸಾರ್ವಜನಿಕ ವಾಟ್ಸಪ್ ಗ್ರೂಪ್‌ಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಬಂದಾಗ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಗ್ರೂಪ್ ಚರ್ಚೆಗಳಿಗೆ ಸ್ಪಂದಿಸಿದ್ದೂ ಇದೆ. ಹಾಗಾಗಿ ವಾಟ್ಸಪ್ ಗ್ರೂಪ್‌ಗಳಲ್ಲಿ ಬರುವ ವಿಷಯಗಳು ನೇರವಾಗಿ ಅಧಿಕಾರಿಗಳಿಗೂ ತಲುಪುವುದರಿಂದ ಮತದಾನ ಮುಗಿಯುವ ತನಕ ಗ್ರೂಪ್ ಅಡ್ಮಿನ್‌ಗಳು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ…