ರಾಜಧಾನಿಗೆ ಸಿಂಗಾಪುರ ಮಾದರಿಯ ಹಸಿರು ನವೋದ್ಯಮ; ಸಮಗ್ರ ಅಭಿವೃದ್ಧಿಗೆ ಇನ್ನೇನಿವೆ?

vidhanasoudha
Published on

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಈ ಸಲದ ಬಜೆಟ್​​ನಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ರಾಜ್ಯ ಸರ್ಕಾರ, ಸಾರ್ವಜನಿಕರಲ್ಲಿ ಸುಸ್ಥಿರ ಜೀವನ ಶೈಲಿಯ ಅರಿವು ಮೂಡಿಸಲು ಸಿಂಗಾಪುರ ಮಾದರಿಯ ಗ್ರೀನ್ ಎಕ್ಸ್​ಪೋ ನಿರ್ಮಿಸಲಿದೆ. ಇದಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎನ್​ಜಿಇಎಫ್​ನ 105 ಎಕರೆ ಪ್ರದೇಶ ಬಳಸಿಕೊಂಡು ಪರಿಸರಸ್ನೇಹಿ ಟೆಕ್ನಾಲಜಿ, ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲಸೌಕರ್ಯ, ಹಸಿರು ನವೋದ್ಯಮಗಳ ಪ್ರಾತ್ಯಕ್ಷಿಕೆ ನೀಡಲಿದೆ. ಅದರಲ್ಲೂ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 8,409 ಕೋಟಿ ರೂ. ಅನುದಾನ.

ಉಳಿದಂತೆ ಬೆಂಗಳೂರಿಗೆ ಏನೇನು?

- ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು 6,000 ಕೋಟಿ ರೂ. ವೆಚ್ಚದಲ್ಲಿ 'ಅಮೃತ್ ನಗರೋತ್ಥಾನ' ಯೋಜನೆ ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

- 2021-22ನೇ ಸಾಲಿನಲ್ಲಿ ನಮ್ಮ ಮೆಟ್ರೊ ಹಂತ-2ರಲ್ಲಿ 7.53 ಕಿ.ಮೀ. ಹೆಚ್ಚುವರಿ ಮಾರ್ಗ ಕಾರ್ಯಾರಂಭಿಸಿದ್ದು, 2022-23ನೇ ಸಾಲಿನಲ್ಲಿ 33 ಕಿ.ಮೀ.ಗಳ ಮಾರ್ಗ ಸೇರಿಸಲಾಗುವುದು. ಇದರಿಂದ ಒಟ್ಟಾರೆ 89 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಹೊಂದಿದಂತಾಗುತ್ತದೆ.

- ಬೆಂಗಳೂರು ಮೆಟ್ರೊ ಹಂತ-3 ಯೋಜನೆಯನ್ನು ಅಂದಾಜು 11,250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್) ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಕೆ.

- 2022-13ನೇ ಸಾಲಿನಲ್ಲಿ 37 ಕಿ.ಮೀ. ಉದ್ದದ ಸರ್ಜಾಪುರದಿಂದ ಆಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 36 ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕ್ರಮ.

- ಪಾದಚಾರಿಗಳು ಮತ್ತು ರಸ್ತೆ ಬದಿ ವ್ಯಾಪಾರಿಗಳ ಸುರಕ್ಷತೆ, ಮೆಟ್ರೋ-ಬಸ್​ ನಿಲ್ದಾಣ ಸಂಪರ್ಕಕ್ಕಾಗಿ ಬನಶಂಕರಿ ಜಂಕ್ಷನ್​​ನಲ್ಲಿ 45 ಕೋಟಿ ರೂ. ವೆಚ್ಚದ ಸ್ಕೈ ವಾಕ್​.

- ವೈಟ್​ಫೀಲ್ಡ್​, ಕೆ.ಆರ್.ಪುರ, ಬಯ್ಯಪ್ಪನಹಳ್ಳಿ, ಯಶವಂತಪುರ, ಜ್ನಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ ಭಾರತೀಯ ರೈಲ್ವೆಯೊಂದಿಗೆ ಮೆಟ್ರೊ ರೈಲು ನಿಲ್ದಾಣ ಸಂಪರ್ಕಿಸಲು 55 ಕೋಟಿ ರೂ. ವೆಚ್ಚದ ಕಾಮಗಾರಿ.

- ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಬಾಕಿ 1297 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್​ ಸಿಟಿಯಾಗಿ ಅಭಿವೃದ್ಧಿ.

- ಜಲಮಾಲಿನ್ಯ ತಡೆಗಟ್ಟಲು ನಗರದ ವಿವಿಧ ಸ್ಥಳಗಳಲ್ಲಿರುವ ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು 1,500 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನ ಮತ್ತು ಉನ್ನತೀಕರಣ.

- ಮಳೆ ನೀರು ಹರಿಯುವಿಕೆಗೆ ಬಹೃತ್ ಮಳೆ ನೀರುಗಾಲುವೆಗಳನ್ನು ಮತ್ತು ಮಳೆ ಸುರಿದಾಗ ಪ್ರವಾಹ ಉಂಟಾಗದಂತೆ ತಡೆಯಲು ರಾಜಾಕಾಲುವೆ ಅಭಿವೃದ್ಧಿಗಾಗಿ 1,500 ಕೋಟಿ ರೂ. ಮೊತ್ತದಲ್ಲಿ ಯೋಜನೆ.

- ರಾಜಧಾನಿಯ ನಾಲ್ಕು ಭಾಗಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ್ಲಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.

- ಆಯ್ದ 20 ಸರ್ಕಾರಿ ಶಾಲೆಗಳನ್ನು 89 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net