

ರಟ್ಟಿಹಳ್ಳಿ: ಜಿಲ್ಲಾದ್ಯಂತ ಕೆಲವೆಡೆ ಸಾಲಗಾರರಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿಯಿಂದ ಸಾಲವಸೂಲಾತಿಗೆ ನೀಡುತ್ತಿರುವ ಕಿರುಕುಳದಿಂದಾಗಿ ಆತ್ಮಹತ್ಯೆ ಮತ್ತು ಮನೆಗಳು, ಗ್ರಾಮಗಳನ್ನು ತೊರೆಯುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದೆ. ಮೈಕ್ರೋಫೈನಾನ್ಸ್ ಸಿಬ್ಬಂದಿ ಸಾಲಗಾರರಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು. ಅವರಿಗೆ ಸಮಯಾವಕಾಶ ನೀಡಿ ಸಾಲವನ್ನು ಕಂತಿನ ರೂಪದಲ್ಲಿ ಪಡೆದುಕೊಳ್ಳಬೇಕು. ಕಿರುಕುಳ ನೀಡಿದ್ದೇ ಆದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಬಸವರಾಜ ಬಿ.ಎಸ್. ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕಿನ ಮೈಕ್ರೋಫೈನಾನ್ಸ್ ಸೇರಿ ಇತರೆ ಖಾಸಗಿ ಸಹಕಾರಿ ಸಂಘಗಳ ಸಿಬ್ಬಂದಿಯೊಂದಿಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸಿಬ್ಬಂದಿಗಳು ಸಾಲಗಾರರಿಂದ ಹೆಚ್ಚಿನ ಬಡ್ಡಿ ಶುಲ್ಕ ವಸೂಲಿ ಮಾಡಬಾರದು. ಕೆಲ ನಿಯಾಮವಳಿಗಳನ್ನು ಅನುಸರಿಸಿ ಸಾಲಗಾರರ ಪರಿಸ್ಥಿತಿ ಅವಲೋಕಿಸಬೇಕಾಗುತ್ತದೆ. ಆರ್ಥಿಕವಾಗಿ ತೊಂದರೆಯಲ್ಲಿರುವ ಮತ್ತು ಸಂಕಷ್ಟದಲ್ಲಿರುವ ಬಡಕುಟುಂಬಗಳ ಸಾಲಗಾರರಿಗೆ ಸಮಯಾವಕಾಶ ನೀಡಿ ಸಾಲ ಪಾವತಿಸಿಕೊಳ್ಳಬೇಕು. ಪದೇ ಪದೆ ಅವರ ಮನೆಗಳಿಗೆ ಭೇಟಿ ನೀಡಿ ಕಿರುಕುಳ ನೀಡಬಾರದು ಎಂದು ಫೈನಾನ್ಸ್ ಸಿಬ್ಬಂದಿಗೆ ತಾಕೀಕು ಮಾಡಿದರು.
ರಟ್ಟಿಹಳ್ಳಿ ಪಟ್ಟಣದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬರುತ್ತಿದೆ. ಈ ಬಗ್ಗೆ ಯಾರೇ ದೂರು ನೀಡಿದರೂ ಮೀಟರ್ ಬಡ್ಡಿ ವ್ಯವಹಾರ ಮಾಡುವವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಿಎಸ್ಐ ರಮೇಶ ಪಿ.ಎಸ್. ಎಚ್ಚರಿಕೆ ನೀಡಿದರು.