

ತಿ.ನರಸೀಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭಾನುವಾರ ಭೇಟಿ ನೀಡಿದ್ದ ಅಂತರರಾಷ್ಟ್ರೀಯ ಮಟ್ಟದ ಕಂಪ್ಯೂಟರ್ ವಿಜ್ಞಾನಿ ಹಾಗೂ ರೋಬೋಟಿಕ್ ತಜ್ಞ ಪ್ರೊ.ಎಸ್.ಎಸ್.ಐಯ್ಯಂಗಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ತಾಲೂಕಿನ ಹೆಮ್ಮಿಗೆ ಮೂಲದವರೇ ಆಗಿರುವ ಪ್ರೊ.ಸುಂದರರಾಜ ಸೀತಾರಾಮ್ ಐಯ್ಯಂಗಾರ್ ಅನಿವಾಸಿ ಭಾರತೀಯರಾಗಿದ್ದು, ಅವರು ಮಾನವೀಯ ಮೌಲ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಪ್ರೊ.ಎಸ್.ಎಸ್.ಐಯ್ಯಂಗಾರ್, ಬದುಕಿನಲ್ಲಿ ಏನೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಶಿಸ್ತು, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆದು ಶ್ರೇಷ್ಠ ಸಾಧನೆಗಳನ್ನು ಮಾಡಿ ಭಾರತದ ಹೆಮ್ಮೆಯ ಮಕ್ಕಳಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅವರು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮೆಷಿನ್ ಲಾಂಗ್ವೇಜ್ ಇನ್ನಿತರ ಸಾಫ್ಟ್‌ವೇರ್‌ಗಳನ್ನು ಒಳಗೊಂಡ ವಿಶೇಷವಾದ ಕಂಪ್ಯೂಟರ್ ಅನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು.
ಪ್ರಾಂಶುಪಾಲ ಡಾ.ಎಚ್.ವಿ.ಉದಯಕುಮಾರ್ , ಲೇಖಕಿ ಕಮಲ ರಾಜೇಶ್, ರಾಜೇಶ್, ಡಾ. ವಿಠ್ಠಲ್, ಡಾ.ನಂದೀಶ್ವರ್, ಗ್ರಂಥಪಾಲಕ ಡಾ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಡಾ.ಡಿ.ಕವಿತಾ, ಡಾ.ಆರ್.ಕೆಂಪರಾಜು, ಪಿ.ಆರ್. ಸವಿತಾ, ಪ್ರೊ.ಬಿ.ಎಂ.ರಾಮಮೂರ್ತಿ, ಪ್ರೊ.ಮಹೇಶ, ಪ್ರೊ.ರಾಘವೇಂದ್ರ ಪ್ರಸಾದ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು ಇದ್ದರು.
ಹೆಮ್ಮೆಯ ಸಂಗತಿ: ಪ್ರೊ.ಎಸ್.ಎಸ್. ಐಯ್ಯಂಗಾರ್ ಅವರು ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕ ಹಾಗೂ ಫ್ಲೋರಿಡಾದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ನಿರ್ದೇಶಕರಾಗಿದ್ದಾರೆ. ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ತಮ್ಮ ಹಲವು ಸಂಸ್ಥೆಗಳ ನಿರ್ದೇಶಕರು ಆಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.