ಪ್ರಧಾನಿ ಯಾವುದೇ ನಿರ್ಧಾರ ಕೈಗೊಂಡರೂ ಸ್ವಾಗತ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ

minister santhosh lad
ಕಾರ್ಮಿಕ ಸಚಿವ ಸಂತೋಷ್ ಲಾಡ್
Published on

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಿರ್ಧಾರ ತಗೆದುಕೊಂಡರೂ ನಾವು ಸ್ವಾಗತಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಹಿಂದೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಮಂಡಿಯೂರಿ ಕೂರುವಂತೆ ಮಾಡಿದ್ದರು. 1971ರಲ್ಲಿ ಯುದ್ಧದ ಸಂದರ್ಭದಲ್ಲಿ ಯಾವ ರೀತಿ ಕ್ರಮ ಆಗಿತ್ತು ಎಂಬುದನ್ನು ಪಾಕಿಗಳಿಗೆ ನೆನಪಿಸಬೇಕು. ಅದೇ ರೀತಿ ಈಗಲೂ ಕೇಂದ್ರ ಸರ್ಕಾರ ಮಾಡಲಿ. ಪ್ರಧಾನಿ ಮೋದಿ ಯಾವುದೇ ನಿರ್ಧಾರ ಕೈಗೊಂಡರೂ ಸ್ವಾಗತ ಎಂದರು.

ಪಾಕ್ ಪರ ಘೋಷಣೆ ಕೂಗಿದರೆ ಶಿಕ್ಷೆ ಆಗಲಿ:

ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಯಾಕೆ ಕೂಗುತ್ತಿದ್ದಾರೆ ಎಂಬುದಕ್ಕೆ ನೂರಾರು ಕಾರಣಗಳಿವೆ. ಅವರ ಮೇಲೆ ಅತ್ಯಾಚಾರಗಳು ಆಗಿಲ್ಲವಾ? ಅದನ್ನೂ ನಾವು ನೋಡಬೇಕು. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ನಾನಾ ಭಾಗಗಳಲ್ಲೂ ಈ ರೀತಿಯ ಘೋಷಣೆ ಕೂಗಿರುವ ಘಟನೆಗಳು ನಡೆದಿವೆ. ಅದು ಯಾಕೆ ನಡೆಯುತ್ತಿದೆ ಎಂಬುದಕ್ಕೆ ನಾನು ಹೊಣೆಗಾರ ಅಲ್ಲ. ನಾನು ಅದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಲಿ? ಹಾಗಂತ ನಾನು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಬೆಂಬಲಿಸುವುದಿಲ್ಲ. ನನ್ನ ತಮ್ಮನೇ ಆ ಕೂಗು ಕೂಗಿದ್ದರೂ ಅವನ ಮೇಲೆ ಕ್ರಮ ಆಗಬೇಕು. ಇವತ್ತಿನ ಪರಿಸ್ಥಿತಿಯಲ್ಲಿ ವಿಷಯಗಳು ಡೈವರ್ಟ್ ಆಗಬಾರದು ಎಂದರು.

ಪ್ರಧಾನಿ ಗಾಯಬ್ ಎಂದು ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ವಾಪಸ್ ಪಡೆದ ವಿಚಾರವಾಗಿ ಮಾತನಾಡಿ, ಆ ವಿಚಾರ ನನಗೆ ಗೊತ್ತಿಲ್ಲ. ಯಾರು ಯಾಕೆ ಮಾಡಿದರು, ಯಾಕೆ ವಾಪಸ್ ತೆಗೆದುಕೊಂಡರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net