ಶಿಕ್ಷಣ ಕಲಿಸಿದ್ದು ಸಮಾಜಕ್ಕೆ ಧಾರೆ ಎರೆಯಿರಿ

h17-jabin college
Published on

ಹುಬ್ಬಳ್ಳಿ: ಶಿಕ್ಷಣವೆಂದರೆ ಬರೀ ಬದುಕು ಕಟ್ಟಿಕೊಳ್ಳುವುದಷ್ಟೇ ಅಲ್ಲ, ಉಳಿಸಿದ್ದನ್ನು ಸಮಾಜಕ್ಕೆ ಧಾರೆ ಎರೆಯುವ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದು ಹು-ಧಾ ಪೊಲೀಸ್ ಆಯುಕ್ತಾಲಯದ ಡಿಸಿಪಿ ಸಿ.ಆರ್. ರವೀಶ ಸಲಹೆ ನೀಡಿದರು.

ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ 2024-25ನೇ ಸಾಲಿನ 68ನೇ ಶೈಕ್ಷಣಿಕ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪಠ್ಯದ ಜತೆಗೆ ಪ್ರಪಂಚದ ಜ್ಞಾನವೂ ಅಗತ್ಯ. ಜೀವನಕ್ಕೆ ಪೂರಕ ಜ್ಞಾನಾರ್ಜನೆಗಾಗಿ ಪುಸ್ತಕಗಳಿವೆ. ಸತತ ಅಧ್ಯಯನ ಮಾಡುತ್ತಿರಬೇಕು. ಶೈಕ್ಷಣಿಕವಾಗಿ ಬಲ ಶಾಲಿಗಳಾಗಬೇಕು. ಇದರಿಂದ ಎಂಥದ್ದೇ ಕಷ್ಟ ಬಂದರೂ ಎದುರಿಸುವ ಧೈರ್ಯ ಬರುತ್ತದೆ. ನೀವು ಕಲಿತ ಶಾಲೆಗೆ ಮತ್ತು ಮನೆಗೆ ಕೀರ್ತಿ ತರುವಂಥವರಾಗಬೇಕು ಎಂದರು.

ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜ್ ವೇದಿಕೆ ಉಪಾಧ್ಯಕ್ಷೆ ಡಾ. ಸುಧಾ ಪಾಟೀಲ ವಾರ್ಷಿಕ ವರದಿ ಓದಿದರು. ಡಾ. ಪ್ರಭಾಕರನ್ ಟಿ. ಜಿಮ್ಖಾನಾ ಚಟುವಟಿಕೆಗಳ ವರದಿ ಓದಿದರು. ಪ್ರಾಂಶುಪಾಲೆ ಡಾ. ಸಂಧ್ಯಾ ಆರ್. ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು.

ನಿವೃತ್ತ ಸಿಬ್ಬಂದಿ ಹಾಗೂ ಶೈಕ್ಷಣಿಕ ಸಾಲಿನ ಸಾಧಕರನ್ನು ಗಣ್ಯರು ಸನ್ಮಾನಿಸಿದರು. ಪಾಲಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net