

ಬೆಂಗಳೂರು ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾದರೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ಜನಸಾಮಾನ್ಯರನ್ನು ತಲುಪಲು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.
ಭಾನುವಾರ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರ ಬಹುಮುಖಿ ಚಿಂತನೆಗಳು ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಹೀಗಾದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಟಿ. ತಿಮ್ಮೇಗೌಡರು ಇಂತಹ ಮರ್ಜಿಗೆ ಒಳಗಾದವರಲ್ಲ. ಅಧಿಕಾರ ಎನ್ನುವುದು ಹೊಣೆಗಾರಿಕೆ. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ಆಡಳಿತದಲ್ಲಿ ನೈತಿಕ ಪ್ರಜ್ಞೆ ಇಟ್ಟುಕೊಂಡು ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂಬುದಕ್ಕೆ ತಿಮ್ಮೇಗೌಡರು ಮಾದರಿ. ಇವರು ಕೋಲಾರದಲ್ಲಿ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಆದಾಗ ಆ ವ್ಯಾಪ್ತಿಯ ಜನ ಪ್ರತಿಭಟಿಸಿದ್ದನ್ನು, ವಿರೋಧಿಸಿದ್ದನ್ನು ಕಂಡಿದ್ದೇವೆ. ಅಧಿಕಾರವನ್ನು ಎಂದಿಗೂ ಸ್ವ ಹಿತಕ್ಕಾಗಿ ಬಳಸಿಕೊಂಡವರಲ್ಲ ಎಂದು ಶ್ಲಾಘಿಸಿದರು.
ವಿಶ್ರಾಂತ ಕುಲಪತಿ ಡಾ.ಹಿ.ಚೀ. ಬೋರಲಿಂಗಯ್ಯ ಮಾತನಾಡಿ, ಅನ್ಯ ರಾಜ್ಯದಿಂದ ಬಂದ ಐಎಎಸ್ ಅಧಿಕಾರಿಗಳು ಇಲ್ಲಿನ ನೆಲ, ಜಲ, ಸಂಸ್ಕೃತಿಗಳ ಬಗ್ಗೆ ಅರಿಯದೇ, ಪ್ರೀತಿ ಬೆಳೆಸಿಕೊಳ್ಳದೇ ಆಡಳಿತ ನಡೆಸುವುದು ದೌರ್ಭಾಗ್ಯ. ಹೀಗಾಗದೆ ನಮ್ಮ ರಾಜ್ಯದ ಅಧಿಕಾರಿಗಳೇ ಇಲ್ಲಿಗೆ ಬಂದಾಗ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದ್ದನ್ನು ನೋಡಿದ್ದೇವೆ ಎಂದರು.
ಟಿ.ತಿಮ್ಮೇಗೌಡರು ನೆಲ ಮತ್ತು ಜಲದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದವರು. ಕಾವೇರಿ ನದಿ ನೀರು ಹಂಚಿಕೆ ಸೇರಿ ಇಡೀ ಸಮಸ್ಯೆಯನ್ನು ಅತ್ಯಂತ ತಲಸ್ಪರ್ಷಿಯಾಗಿ ಅಧ್ಯಯನ ಮಾಡಿ ತಿಳಿದುಕೊಂಡು ರಾಜ್ಯದ ಪರ ಅಧಿಕೃತವಾಗಿ ಮಾತನಾಡುವ ಪರಿಪೂರ್ಣ ಜ್ಞಾನವನ್ನು ಹೊಂದಿರುವ ಏಕೈಕ ವ್ಯಕ್ತಿ. ಕಾವೇರಿ ನಿಗಮದ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾಗಿ ಹೊಸ ಯೋಜನೆಗಳನ್ನು ತಂದರು. ಕಣ್ವ ಜಲಾಶಯ ಸೇರಿ ಹಲವಾರು ಸಣ್ಣ ಅಣೆಕಟ್ಟು ನಿರ್ಮಿಸಿ ರೈತರ ಹಿತ ಕಾದಿದ್ದಾರೆ ಎಂದರು.
ವೇದಿಕೆ ಅಧ್ಯಕ್ಷ ಜೀವನ್ಮುಖಿ ಸುರೇಶ್ ಸೇರಿ ಇತರರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ ಅವರನ್ನು ಗೌರವಿಸಲಾಯಿತು.