

ಮೈಸೂರು: ಜಂಬೂ ಸವಾರಿ ವೀಕ್ಷಣೆಗಾಗಿ ಶಿಥಿಲಗೊಂಡಿರುವ ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೆ ಸಹಸ್ರಾರು ಜನರು ಕುಳಿತುಕೊಳ್ಳುವ ಮೂಲಕ ಅಪಾಯದ ಆತಂಕ ಎದುರಾಗಿತ್ತು. ಇದನ್ನು ತಡೆಯುವಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ವಿಫಲವಾಯಿತು.
ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಶನಿವಾರ ನಡೆಯಿತು. ಗಜಪಡೆಯ ನಾಯಕ ಅಭಿಮನ್ಯು ಆನೆ ಹೊತ್ತುಕೊಂಡಿದ್ದ 750 ಕೆಜಿ ಚಿನ್ನ ಲೇಪಿತ ಅಂಬಾರಿ ಮೇಲೆ ಪ್ರತಿಷ್ಠಾಪಿತ ಚಾಮುಂಡೇಶ್ವರಿ ದೇವಿಯ ವೀಕ್ಷಣೆಗೆ ರಾಜಬೀದಿಯಲ್ಲಿ ಸಹಸ್ರಾರು ಜನರು ನೆರೆದಿದ್ದರು.
ನಗರದ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆ ಮತ್ತು ಹಾಗೂ ನಗರ ಬಸ್ ನಿಲ್ದಾಣ ಬಳಿಯ ಲ್ಯಾನ್ಸ್‌ಡೌನ್ ಕಟ್ಟಡಗಳ ಮೇಲೆ ಸಾವಿರಾರು ಜನರು ಕುಳಿತುಕೊಂಡು ಜಂಬೂ ಸವಾರಿ ವೀಕ್ಷಿಸಿದ್ದಾರೆ. ಒಂದು ವೇಳೆ, ಇದು ಕುಸಿದು ಬಿದ್ದು ಅನಾಹುತವಾಗಿದ್ದರೆ ಗತಿ ಏನು? ಎಂಬ ಪ್ರಶ್ನೆ ಮೂಡಿದೆ.
ಉಭಯ ಕಟ್ಟಡಗಳು ಶಿಥಿಲಗೊಂಡಿವೆ. ಇದು ಯಾವಾಗ ಬೇಕಾದರೂ ಕುಸಿದು ಬೀಳಬಹುದು. ಇಂತಹ ದುರ್ಬಲ ಸ್ಥಿತಿಯಲ್ಲಿರುವ ಕಟ್ಟಡಗಳ ಮೇಲೆ ಸಾವಿರಾರು ಜನರು ಒಂದೆಡೆ ಕುಳಿತುಕೊಂಡಿದ್ದು ಅಪಾಯಕ್ಕೆ ಆಹ್ವಾನಕ್ಕೆ ಕೊಟ್ಟಂತಿತ್ತು. ಇದನ್ನು ತಡೆಯಲು ಪಾಲಿಕೆ, ಪೊಲೀಸರು ಏಕೆ ಕ್ರಮ ವಹಿಸಲಿಲ್ಲ ಎಂಬುದು ಸಾರ್ವಜನಿಕರು ಪ್ರಶ್ನೆಯಾಗಿದೆ.
ಅಲ್ಲದೆ ಎರಡು ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡಿರುವ ಕಾರಣಕ್ಕೆ ನೆಲಸಮಗೊಳಿಸಿ ಮರುನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಾಲಿಕೆ, ರಾಜ್ಯ ಸರ್ಕಾರ ಹೊಂದಿದೆ. ಆದರೆ, ಯಾವುದೇ ಅಪಾಯವನ್ನು ಲೆಕ್ಕಿಸದೆ ಜನರು ಈ ಕಟ್ಟಡ ಏರಿ ಜಂಬೂಸವಾರಿಯನ್ನು ನೋಡಿದ್ದಾರೆ. ಇದೀಗ ಸಾರ್ವಜನಿಕ ವಲಯದಲ್ಲಿ ಈ ಕಟ್ಟಡಗಳ ಸಾಮರ್ಥ್ಯದ ಬಗ್ಗೆ ಚರ್ಚೆಯಾಗುತ್ತಿದೆ.
ಈ ಕಟ್ಟಡಗಳು ಕುಸಿದು ಬೀಳುವ ಹಂತದಲ್ಲಿದೆ ಎಂದು ಸರ್ಕಾರ ದಶಕದಿಂದ ಹೇಳುತ್ತಲೇ ಬಂದಿದೆ. ಜಿಲ್ಲಾಡಳಿತ, ಪಾಲಿಕೆ ಸಹ ಹೀಗೆ ಬಿಂಬಿಸುವ ಕಾರ್ಯಕ್ರಮ ಮಾಡುತ್ತಿದೆ. ಈ ಅವಧಿಯಲ್ಲಿ ಹಲವು ಗಾಳಿ, ಮಳೆಯ ಹೊಡೆತವನ್ನು ಕಟ್ಟಡಗಳು ಎದುರಿಸಿವೆ. ಹೀಗಾಗಿ ಈ ಕಟ್ಟಡಗಳು ಕುಸಿದು ಬೀಳುವ ಆತಂಕ ಜನರಲ್ಲೂ ಇತ್ತು. ಆದರೆ ಸಾವಿರಾರು ಜನರು ಈ ಕಟ್ಟಡದ ಮೇಲೆ ಕುಳಿತು ಜಂಬೂ ಸವಾರಿ ವೀಕ್ಷಿಸಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ.
ಈಗಾಗಲೇ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಪಾಲಿಕೆ ಆಲೋಚಿಸಿದೆ. ಇದಕ್ಕೆ ಜಿಲ್ಲಾ ಪಾರಂಪರಿಕ ಸಮಿತಿ ಸಮ್ಮತಿ ಕೊಟ್ಟಿದೆ. ಹೈಕೋರ್ಟ್‌ನ ಒಪ್ಪಿಗೆ ಸಿಗುವುದು ಮಾತ್ರ ಬಾಕಿ ಉಳಿದಿದೆ. ಒಂದು ವೇಳೆ ದೇವರಾಜ ಮಾರುಕಟ್ಟೆ ನೆಲಸಮವಾದರೆ ಮುಂದೆ ಲ್ಯಾನ್ಸ್‌ಡೌನ್ ಕಟ್ಟಡವೂ ನೆಲಸಮಗೊಳ್ಳಲಿದೆ.
ಈ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸುವುದಕ್ಕೆ ಮೈಸೂರು ರಾಜಮನೆತನದಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಪಾರಂಪರಿಕ ಕಟ್ಟಡಗಳನ್ನು ಇರುವ ಸ್ಥಿತಿಯಲ್ಲೇ ಅಭಿವೃದ್ಧಿಪಡಿಸಬಹುದು ಎಂಬುದು ರಾಜಮನೆತನ ಹಾಗೂ ನಗರದ ಪಾರಂಪರಿಕ ತಜ್ಞರ ಅಭಿಪ್ರಾಯ.
ಧಾರಾಕಾರ ಮಳೆಗೆ 2012ರ ಆ.25ರಂದು ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಈ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಛಾವಣಿ ಧರೆಗುರುಳಿದೆ. 2015ರ ಜನವರಿ 11ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು
. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ 2016ರ ಆ.28ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭದಲ್ಲಿ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ನವೀಕರಣ ಕಾರ್ಯವನ್ನು ಕೈ ಬಿಡಲಾಯಿತು. ಅಲ್ಲಿಂದ ಇಲ್ಲಿಯ ವರೆಗೂ ನವೀಕರಣ ಮತ್ತು ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸರಿಯಾಗಿ ನಿರ್ವಹಣೆ ಸಹ ಮಾಡಿಲ್ಲ.