ಕೇಂದ್ರ ಪ್ರಕಟಿಸಲಿರುವ ಮಾರ್ಗಸೂಚಿಯಲ್ಲಿ ಏನಿರುತ್ತದೆ? ಯಾವುದು ಸಡಿಲ, ಇನ್ಯಾವುದು ಬಿಗಿ?

stroe april
Published on

ಬೆಂಗಳೂರು: ದೇಶ ವ್ಯಾಪಿ ಜಾರಿಗೆ ಬರುವ ಮಾರ್ಗಸೂಚಿಯ ಸಂಭವನೀಯ ಮುಖ್ಯಾಂಶಗಳು ಲಭ್ಯವಾಗಿವೆ. ಮುಂದಿನ 19 ದಿನ ಜನರಿಗೆ ನಿತ್ಯ ಏನೆಲ್ಲ ವಸ್ತು, ಸೇವೆಗಳು ಸಿಗಲಿದೆ ಎಂಬ ಅಂಶವನ್ನು ಇದರಲಿದೆ.

ಕರೊನಾ ಸೋಂಕು ರೋಗಿಗಳ ಅಂಕಿಸಂಖ್ಯೆ ಆಧರಿಸಿ ಕೆಂಪು, ಹಳದಿ ಮತ್ತು ಹಸಿರು ವಲಯ ಎಂದು ವಿಂಗಡಿಸಲಾಗಿದೆ. ಕೆಂಪು ಮತ್ತು ಹಳದಿ ವಲಯದಲ್ಲಿ ಲಾಕ್​ಡೌನ್ ಮೊದಲಿಗಿಂತ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲು ಆಯಾ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಭೂ, ವಾಯು, ನೌಕ ಸೇನೆ ಮತ್ತು ಕೇಂದ್ರ ಸಶಸ್ತ್ರ ಪಡೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಜಾನೆ ಇಲಾಖೆಯ ಸೇವೆಗೆ ಅನುಮತಿ ಸಿಕ್ಕಿದೆ.

ಯಾವುದು ಇರುವುದಿಲ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಕಚೇರಿ, ವ್ಯಾಪಾರ ವಹಿವಾಟು, ಖಾಸಗಿ ಸಂಸ್ಥೆಗಳು ಮತ್ತು ಕಾರ್ಖಾನೆ, ರೈಲು, ವಿಮಾನ, ಮೆಟ್ರೊ ರೈಲು, ಬಸ್, ಹೋಟೆಲ್ ಉದ್ಯಮ, ಶಾಲಾ-ಕಾಲೇಜು, ಶೈಕ್ಷಣಿಕ ಸಂಶೋಧನಾ, ತರಬೇತಿ, ಕೋಚಿಂಗ್ ಸೆಂಟರ್, ಧಾರ್ವಿುಕ ಕೇಂದ್ರಗಳು, ಧಾರ್ವಿುಕ ಸಭೆ- ಸಮಾರಂಭ, ಸಾಮೂಹಿಕ ಪ್ರಾರ್ಥನೆ,

ಸಾರ್ವಜನಿಕ ವಲಯ: ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ ಸಿಬ್ಬಂದಿ ಮತ್ತು ತುರ್ತು ಸೇವೆಗಳು, ವಿದ್ಯುತ್, ನೀರು ಸರಬರಾಜು, ಪೌರ ಕಾರ್ವಿುಕರು, ಜಿಲ್ಲಾಧಿಕಾರಿ ಕಚೇರಿ, ಮುನಿಸಿಪಲ್ ಕಚೇರಿ, ಆಹಾರ ಪೂರೈಸುವ ಅಡುಗೆ ಮನೆಗಳು, ಅರಣ್ಯ ಇಲಾಖೆ, ಮೃಗಾಲಯ, ಸಮಾಜ ಕಲ್ಯಾಣ ಇಲಾಖೆ ಕಾರ್ಯ ನಿರ್ವಹಿಸಲಿವೆ.

ದಿನನಿತ್ಯ ವಸ್ತುಗಳ ಪೂರೈಕೆ: ಕೃಷಿ ಉತ್ಪನ್ನಗಳನ್ನು ಖರೀದಿಸುವ ಎಪಿಎಂಸಿ, ಆಸ್ಪತ್ರೆ, ಪಶು ಆಸ್ಪತ್ರೆ, ಲ್ಯಾಬೊರೇಟರಿಗಳು, ಆಂಬುಲೆನ್ಸ್, ದಿನಸಿ, ಹಾಲು, ಮಾಂಸ-ಮೀನು, ಪಶು ಆಹಾರ, ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ, ಔಷಧ ಅಂಗಡಿ.

ಯಾವ ಸೇವೆ ಸಿಗಲಿದೆ: ಪೆಟ್ರೋಲ್ ಬಂಕ್, ಅಂಚೆ ಕಚೇರಿ, ಬ್ಯಾಂಕ್, ಎಟಿಎಂ, ಮುದ್ರಣ ಮತ್ತು ದೃಶ್ಯ ಮಾಧ್ಯಮ, ದೂರವಾಣಿ , ಇಂಟರ್​ನೆಟ್, ಇ-ಕಾಮರ್ಸ್, ಕೋಲ್ಡ್ ಸ್ಟೋರೇಜ್ ಘಟಕ, ಗೋದಾಮು, ಸೆಕ್ಯುರಿಟಿ ಗಾರ್ಡ್​ಗಳು, ಸರ್ಕಾರಿ ಕಾಲ್ ಸೆಂಟರ್, ಕೃಷಿ ಸಲಕರಣೆಗಳ ಮಾರಾಟ ಮಳಿಗೆ, ಹೆದ್ದಾರಿಗಳಲ್ಲಿ ಗ್ಯಾರೇಜ್.

ಕೈಗಾರಿಕೆಗೆ ವಿನಾಯಿತಿ: ಆಹಾರ ಉತ್ಪನ್ನ, ಔಷಧ ತಯಾರಿಕೆ, ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಘಟಕಗಳು, ಚಹಾ, ಕಾಫಿ ಪ್ಲಾಂಟೇಷನ್ ತೆರೆಯಲು ಅವಕಾಶ ಕೊಡಲಿದೆ. ಶೇ.50ರಷ್ಟು ಕಾರ್ವಿುಕರಿಂದ ಸೇವೆ ಪಡೆಯುವಂತೆ ಷರತ್ತು ವಿಧಿಸಲಿದೆ.

ಸಂಚಾರಕ್ಕೆ ಅವಕಾಶ: ಸರಕು ಸಾಗಣೆಯ ವಿಮಾನ, ರೈಲು, ಹಡಗು ಮತ್ತು ವಾಹನಗಳಿಗೆ ಅವಕಾಶ. ಮಾಧ್ಯಮ ಮತ್ತು ತುರ್ತು ಸೇವೆ ಒದಗಿಸುವ ವಾಹನಗಳಿಗೆ ವಿನಾಯಿತಿ ಇರಲಿದೆ.

ಆಹಾರ: ಲಾಕ್​ಡೌನ್​ನಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಆಶ್ರಯ ನೀಡಿರುವ ಹೋಟೆಲ್​ಗಳು, ಹೋಂಸ್ಟೇಗಳು, ಲಾಡ್ಜ್, ಮೋಟೆಲ್​ಗಳು, ತುರ್ತು ಸೇವಾ ಸಿಬ್ಬಂದಿಗೆ ಆಶ್ರಯ ನೀಡಿರುವ ಹೋಟೆಲ್​ಗಳು ಕಾರ್ಯ ನಿರ್ವಹಿಸಲು ಅವಕಾಶ ಇದೆ.

ನಿಯಮ ಉಲ್ಲಂಘಿಸಿದರೆ ಜೈಲು

ಲಾಕ್​ಡೌನ್ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ಅಥವಾ ಪೊಲೀಸ್, ಆರೋಗ್ಯ ಕಾರ್ಯಕರ್ತರು ಸೇರಿ ಇನ್ನಿತರ ತುರ್ತು ಸೇವಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಹಾಗೂ ಕೋವಿಡ್-19 ನಿರಾಶ್ರಿತರಿಗೆ ವಿತರಿಸುವ ಪರಿಹಾರ ಸಾಮಗ್ರಿಗಳ ಅವ್ಯವಹಾರ, ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್​ಐಆರ್ ದಾಖಲಿಸಿ ಕನಿಷ್ಠ 1 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net