

ಚಿತ್ರದುರ್ಗ:ಹಿರಿಯೂರು ತಾಲೂಕು ಗೊಲ್ಲರಗಳ್ಳಿ ಗೇಟ್ ಎನ್‌ಎಚ್ 150 ಎ ಹಿರಿಯೂರು ಬಳ್ಳಾರಿ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ 3.30ರ ಹೊತ್ತಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಮಸ್ಕಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್,ಓವರ್‌ಟೇಕ್ ತೆಗೆದುಕೊಳ್ಳುವ ವೇಳೆ ಲಾರಿಗೆ ಹಿಂದಿನಿಂದ ಗುದ್ದಿ ಈ ದುರಂತ ಸಂಭವಿಸಿದೆ. ಮೃತರನ್ನು ಮಸ್ಕಿಯ ರವಿ(23),ಮಾನ್ವಿಯ ನರಸಣ್ಣ(5),ಬೆಂಗಳೂರಿನ ಪಾರ್ವತಮ್ಮ(53)ಹಾಗೂ ಮಾಬಮ್ಮ(35)ಹಾಗೂ ಮೃತ ಮತ್ತೊಬ್ಬರ ಗುರುತು ಪತ್ತೆಯಾಗಬೇಕಿದೆ.
ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರೆ,ಚಳ್ಳಕೆರೆ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಅಸು ನೀಗಿದ್ದಾರೆ. ಎಂಟು ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದು,ಐವರನ್ನು ಜಿಲ್ಲಾಸ್ಪತ್ರೆಗೆ ಹಾಗೂ ಮೂವರನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟ ನೆಯಲ್ಲಿ ಇನ್ನು ಹಲವರು ಗಾಯಗೊಂಡಿದ್ದಾರೆ.
ಬಸ್ಸಿನ ಚಾಲಕನ ಅತಿವೇಗದ ಚಾಲನೆ ದುರಂತಕ್ಕೆ ಕಾರಣವೆಂದು ಎಸ್‌ಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ. ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಂಪೂರ್ಣ ನುಜ್ಜುಗುಜ್ಜಾಗಿರುವ ಬಸ್ ಅಪಘಾತದ ಭೀಕರತೆಯನ್ನು ಬಿಂಬಿಸಿದೆ. ಬಸ್ಸಿನಲ್ಲಿ 51 ಪ್ರಯಾಣಿಕರು ಇದ್ದರೆಂದು ಮೂಲಗಳು ತಿಳಿಸಿವೆ.