

ಬೆಳಗಾವಿ: ನೀರಾವರಿ ಯೋಜನೆ ಮೇಕೆದಾಟು ವಿಚಾರದಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ರಾಜ್ಯದ ಮೇಲೆ ಯಾವ ಹಕ್ಕಿದೆ. ಅವರಿಗೆ ಬಿಜೆಪಿ ರಾಜ್ಯದ ಚುನಾವಣಾ ಜವಾಬ್ದಾರಿ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿ ಗೌಡ ಕಿಡಿಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರ, ಮೇಕೆದಾಟು ಯೋಜನೆ ಪ್ರತಿಭಟನೆಯಲ್ಲಿ ರಾಜ್ಯದ ನೀತಿ ಖಂಡಿಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ಇಲ್ಲಿನ ಬಿಜೆಪಿ ಚುನಾವಣೆ ಹೊಣೆ ಹೊರಿಸಲಾಗಿದೆ. ಸ್ವಾತಂತ್ರ್ಯಪೂರ್ವದಿಂದ ಈವರೆಗೂ ದೇಶದ ರಕ್ಷಣೆಗೆ ಶ್ರಮಿಸಿದ ಕಾಂಗ್ರೆಸ್‌ಗೆ ಪಾಠ ಹೇಳುವ ಅಗತ್ಯ ಬಿಜೆಪಿಗಿಲ್ಲ. 10 ವರ್ಷದಲ್ಲಿ ದೇಶದ ಸ್ಥಿತಿ ಏನಾಗಿದೆ ಎಂಬುದು ದೇಶದ ಜನತೆಗೆ ಅರಿವಾಗಿದೆ. ಕಾರ್ಗಿಲ್ ಯುದ್ಧ ಸಂಭವಿಸಿದಾಗ ಬಿಜೆಪಿ ಎಲ್ಲಿತ್ತು ಎಂದು ಪ್ರಶ್ನಿಸಿದರು. ಮಹಿಳೆಯರ ಜತೆ ಅಶ್ಲೀಲವಾಗಿ ನಡೆದುಕೊಳ್ಳುವ ದುಸ್ಥಿತಿ ಇರುವ ಪಕ್ಷದ ಜತೆ ಬಿಜೆಪಿಗರು ಹೇಗೆ ಇರುತ್ತಾರೆ ಎಂದು ಜೆಡಿಎಸ್‌ಗೆ ಚಾಟಿ ಬೀಸಿದರು. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಬಹುಮತ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.