

ಐಎಂಎ ಪರ ವರದಿ ನೀಡಲು ಹಾಗೂ ಈತನಿಗೆ ಸಾಲ ಪಡೆಯಲು ಸಹಾಯ ಮಾಡಿದ ಕೆಲ ಸರ್ಕಾರಿ ಅಧಿಕಾರಿಗಳು, ಮಾಜಿ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ಇತರ ವ್ಯಕ್ತಿಗಳು ಕೋಟ್ಯಂತರ ರೂ. ಲಂಚ ಪಡೆದಿರುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡ ಮನ್ಸೂರ್, ತನಿಖೆಯ ದಿಕ್ಕು ತಪ್ಪಿಸಿ ಪ್ರಕರಣದಿಂದ ಪಾರಾಗಲು ತನ್ನಿಂದ ಲಂಚ ಪಡೆಯದಿರುವ ಕೆಲ ಪ್ರಭಾವಿ ರಾಜಕಾರಣಿಗಳ ಹೆಸರನ್ನೂ ಹೇಳಿ ಪೇಚಿಗೆ ಸಿಲುಕಿದ್ದಾನೆ.
ಮನ್ಸೂರ್ ಖಾನ್ನ ಹೇಳಿಕೆ ಆಧರಿಸಿ ತನಿಖೆ ನಡೆಸಿದಾಗ ಪ್ರಕರಣದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಅಲ್ಲದೆ, ವಿಚಾರಣೆ ವೇಳೆ ಮನ್ಸೂರ್ ಹೆಸರಿಸಿದ ಪ್ರಭಾವಿ ರಾಜಕಾರಣಿಗಳು ಈತನಿಂದ ಹಣ ಪಡೆದಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು, ದಾಖಲೆಗಳು ಸಿಕ್ಕಿರಲಿಲ್ಲ. ಅನುಮಾನ ಬಂದು ಸಿಬಿಐ ಅಧಿಕಾರಿ ಗಳು ಮತ್ತೆ ಮನ್ಸೂರ್ನನ್ನು ವಿಚಾರಣೆಗೊಳಪಡಿಸಿದಾಗ ಆತ ಮತ್ತೆ ಗೊಂದಲದ ಹೇಳಿಕೆ ನೀಡಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಹೃದಯಸಂಬಂಧಿ ಕಾಯಿಲೆ ಇರುವುದನ್ನು ನೆಪ ಮಾಡಿಕೊಂಡು ನ್ಯಾಯಾಲಯದಿಂದ ಜಾಮೀನು ಪಡೆಯಲು ಆರೋಪಿ ಮನ್ಸೂರ್ ಯತ್ನಿಸುತ್ತಿದ್ದಾನೆ. ಆದರೆ, ಜಾಮೀನು ಸಿಗುವ ಸಾಧ್ಯತೆ ತುಂಬ ಕಡಿಮೆ. ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದ್ದು, ಈ ಇಬ್ಬರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಐವರು ಪೊಲೀಸ್ ಅಧಿಕಾರಿಗಳ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ಅಧಿಕಾರಿಗಳು, ಇದಕ್ಕೆ ಸಂಬಂಧಿಸಿದ ಕೆಲ ದಾಖಲೆ ಸಂಗ್ರಹಿಸಿ ಸದ್ಯದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.
ಇದಾದ ಬಳಿಕ ಚಾರ್ಜ್ಶೀಟ್ನಲ್ಲಿ ಸಿಬಿಐ ಅಧಿಕಾರಿಗಳು ಉಲ್ಲೇಖಿಸುವ ಪೊಲೀಸ್ ಹಾಗೂ ಇತರ ಸರ್ಕಾರಿ ಅಧಿಕಾರಿಗಳು ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ.
ಗ್ರಾಹಕರು ಹೂಡಿಕೆ ಮಾಡಿದ ಕೋಟ್ಯಂತರ ರೂಪಾಯಿಗಳ ಪೈಕಿ ಸ್ವಲ್ಪ ಮೊತ್ತವನ್ನು ಹಳೇ ಹೂಡಿಕೆದಾರರಿಗೆ ಮನ್ಸೂರ್ ಹಿಂದಿರುಗಿಸಿದ್ದ. ಉಳಿದಂತೆ, ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ. ಅರಬ್ ದೇಶಗಳಲ್ಲೂ ಹೂಡಿಕೆ ಮಾಡಲು ಮುಂದಾಗಿದ್ದ. ಆ ಹೂಡಿಕೆಗಳ ಮೂಲಕ ಹಣವನ್ನು ದುಪ್ಪಟ್ಟು ಮಾಡುವುದು ಆತನ ಯೋಜನೆಯಾಗಿತ್ತು. ಆದರೆ, ಅವೆಲ್ಲವೂ ತಲೆಕೆಳಗಾಗಿದ್ದರಿಂದ, ಏನು ಮಾಡಬೇಕೆಂದು ತೋಚದೆ ದುಬೈಗೆ ಓಡಿ ಹೋಗಿದ್ದ ಎಂಬುದು ಸಿಬಿಐ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ.
ಗ್ರಾಹಕರು ಹೂಡಿಕೆ ಮಾಡಿದ್ದ 2.5 ಸಾವಿರ ಕೋಟಿ ರೂ.ಗೂ ಹೆಚ್ಚು ಹಣದ ಬಗ್ಗೆ ಮನ್ಸೂರ್ ಬಳಿ ಸೂಕ್ತ ದಾಖಲೆಗಳಿಲ್ಲ ಎನ್ನಲಾಗಿದೆ. ಹಾಗಾಗಿ, ಪ್ರಭಾವಿಗಳ ಹೆಸರು ಬಳಸಿಕೊಂಡು ತನಿಖೆಯಿಂದ ಬಚಾವಾಗಲು ಆತ ಯತ್ನಿಸುತ್ತಿರುವ ಆರೋಪಗಳು ಕೇಳಿಬಂದಿವೆ.
| ಅವಿನಾಶ ಮೂಡಂಬಿಕಾನ ಬೆಂಗಳೂರು