ಲಕ್ಷ್ಮೀಪುರಕ್ಕೆ ದಾರಿ ಯಾವುದಯ್ಯ?

23sor2
Published on

ಸೊರಬ: ಸಣ್ಣ ಮಳೆ ಬಂದರೂ ಸಾಕು ಕೆಸರುಮಯವಾಗುವ ರಸ್ತೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರ ಮಾಡಲು ಪರದಾಡುವ ಸ್ಥಿತಿ. ಇದು ತಾಲೂಕಿನ ಗಡಿಭಾಗದ ಲಕ್ಷ್ಮೀಪುರ ಗ್ರಾಮದ ದುಸ್ಥಿತಿ.
ತಾಲೂಕಿನ ಕುಪ್ಪಗಡ್ಡೆ ಹೋಬಳಿಯ ದ್ಯಾವನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಹತ್ತಕ್ಕೂ ಅಧಿಕ ಮನೆಗಳಿದ್ದು ನೂರಕ್ಕೂ ಅಧಿಕ ಜನರು 75 ವರ್ಷಗಳಿಂದ ನೆಲೆ ನಿಂತಿದ್ದಾರೆ. ತಾಲೂಕಿನಲ್ಲಿಯೇ ಅತಿ ಹಿಂದುಳಿದ ಗ್ರಾಮವಾಗಿರುವ ಲಕ್ಷ್ಮೀಪೂರಕ್ಕೆ ಸಾರಿಗೆ ವ್ಯವಸ್ಥೆಯೂ ಇಲ್ಲ. ಕನಿಷ್ಠ ರಸ್ತೆ ಸೌಲಭ್ಯ ಸಹ ಇಲ್ಲ. ಈ ಊರಿನ ಜನರು ಪಟ್ಟಣ ಪ್ರದೇಶಗಳಿಗೆ ತೆರಳಬೇಕೆಂದರೆ 4 ಕಿಮೀ ನಡೆದೇ ಸಾಗಬೇಕು. ಮಳೆಗಾಲದಲ್ಲಂತೂ ಇಲ್ಲಿನ ಗ್ರಾಮಸ್ಥರ ಸ್ಥಿತಿ ಹೇಳತೀರದಾಗಿದೆ.
ಸಣ್ಣ ಮಳೆಯಾದರೆ ಸಾಕು ರಸ್ತೆ ಸಂಪೂರ್ಣ ಕೆಸರುಮಯವಾಗುತ್ತದೆ. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ನಗರ ಪ್ರದೇಶಕ್ಕೆ ತೆರಳುವ ಸಾರ್ವಜನಿಕರು ಹಾಗೂ ಹೊಲ-ಗದ್ದೆಗಳಿಗೆ ರೈತರು ಹೋಗಲು ಸಹ ಸಾಧ್ಯವಾಗದಂತಾಗುತ್ತದೆ. ರೋಗಿಗಳನ್ನು ಕರೆದೊಯ್ಯಲು ಆಂಬುಲೆನ್ಸ್ ತೆರಳದಂತೆ ರಸ್ತೆ ಹದಗೆಟ್ಟು ಹೋಗಿದೆ.
ಚುನಾವಣಾ ಪೂರ್ವದಲ್ಲಿ ಈ ಹಿಂದಿನ ಶಾಸಕರಾದ ಕುಮಾರ್ ಬಂಗಾರಪ್ಪ ಅವರು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರೆ ವಿನಾ ರಸ್ತೆ ನಿರ್ಮಾಣವಾಗಲಿಲ್ಲ ಎನ್ನುವುದು ಗ್ರಾಮಸ್ಥರ ದೂರು. ತವನಂದಿ, ಜಡೆ ಮಾರ್ಗದ ನಡುವಿನ ಲಕ್ಷ್ಮೀಪುರ ಗ್ರಾಮದಿಂದ ನೆರೆಯ ಕುಳಗ, ಕೆರೆಕೊಪ್ಪ ಮಾರ್ಗವಾಗಿ ಬನವಾಸಿ, ಜಡೆ ಮಾರ್ಗವಾಗಿ ಆನವಟ್ಟಿ ಮತ್ತು ಹಾನಗಲ್ಲ ಮಾರ್ಗವಾಗಿ ಅನೇಕರು ಸಂಚರಿಸುತ್ತಾರೆ. ಹಾನಗಲ್ಲ ಭಾಗದ ಜನತೆ ಚಂದ್ರಗುತ್ತಿ ತೆರಳುವವರು ಸಹ ಸಮೀಪವಾಗುತ್ತದೆ ಎಂದು ಇದೇ ಮಾರ್ಗವನ್ನು ಬಳಸುವುದು ಉಂಟು. ಇಲ್ಲೊಂದು ಉತ್ತಮ ರಸ್ತೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ.
ಇತ್ತೀಚೆಗೆ ಗ್ರಾಮದಲ್ಲಿ ಜೋಳ ತುಂಬುವ ಲಾರಿಯೊಂದು ಆಗಮಿಸಿದ ವೇಳೆ ರಸ್ತೆಯಲ್ಲಿ ಸಿಲುಕಿತ್ತು. ಸುಮಾರು ಆರೇಳು ತಾಸಿನ ನಿರಂತರ ಕಾರ್ಯಾಚರಣೆ ಮೂಲಕ ಲಾರಿಯನ್ನು ಮೇಲೆತ್ತಲಾಯಿತು. ಇಂತಹ ಘಟನೆಗಳು ಮಳೆಗಾಲದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಗ್ರಾಮೀಣ ಭಾಗಗಳಿಗೆ ಸರ್ಕಾರಗಳು ಮೂಲ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡುವುದಾಗಿ ಘೋಷಣೆ ಮಾಡುತ್ತಲೇ ಇರುತ್ತವೆ. ಆದರೆ ಲಕ್ಷ್ಮೀಪುರದಂತಹ ಕುಗ್ರಾಮಗಳ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಈಗಿನ ಸರ್ಕಾರವಾದರೂ ಲಕ್ಷ್ಮೀಪುರ ಗ್ರಾಮದತ್ತ ಗಮನ ನೀಡಿ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net