ಸಮಸ್ಯೆಯಾದರೆ ಗತಿ ಏನು?

CAN_4972
Published on

ಮೈಸೂರು: ‘ಜನರೇ ಕಷ್ಟದಲ್ಲಿದ್ದಾರೆ. ಇನ್ನು ನಮ್ಮ ಕಷ್ಟ ಏ್ಞಖಿ ದೊಡ್ಡದಲ್ಲ. ಇದನ್ನು ಸಹಿಸಿಕೊಂಡು ಪ್ರಯಾಣಿಕರಿಗೆ ಸೇವೆ ಮುಂದುವರಿಸಿದ್ದೇವೆ. ಯಾವ ಪ್ರಯಾಣಿಕನ ಬಳಿ ರೋಗವಿರುತ್ತದೆಯೋ ಏನೋ ನಮಗೆ ಹೇಗೆ ಗೊತ್ತಾಗುತ್ತದೆ. ಏನಾದರೂ ಸಮಸ್ಯೆಯಾದರೆ ಗತಿ ಏನು ಎಂಬ ದುಗುಡವೂ ಇದೆ..

ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕರಿಂದ ವ್ಯಕ್ತವಾದ ಅಭಿಪ್ರಾಯಗಳಿವು. ಕರೊನಾ ಲಾಕ್‌ಡೌನ್‌ನಿಂದಾಗಿ ಮೇ 19ರಿಂದ ಸರ್ಕಾರಿ ಬಸ್‌ಗಳ ಸೇವೆ ಪುನರಾರಂಭಗೊಂಡಿದೆ. ಅನೇಕ ಅನನಕೂಲಗಳ ನಡುವೆಯೂ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರ ಕೆಲಸದಲ್ಲಿ ಕೆಲ ಬದಲಾವಣೆಯಾಗಿದೆ. ದಿನಕ್ಕೆ ಒಂದು, ಎರಡು ಟ್ರಿಪ್ ಮಾಡಲು ಮಾತ್ರ ಅವಕಾಶ ದೊರೆಯುತ್ತಿದೆ. ಅದಕ್ಕಾಗಿ ಬಹಳಷ್ಟು ಕಾಯಬೇಕಿದೆ.

ಮೈಸೂರು-ಬೆಂಗಳೂರು ಮಾರ್ಗ ಹೊರತುಪಡಿಸಿ ಉಳಿದ ಮಾರ್ಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಕಾರು, ಬೈಕ್‌ನಲ್ಲಿ ಪ್ರಯಾಣಿಸಲು ಇಷ್ಟಪಡುವ ಜನರು ಕೆಂಪು ಬಸ್‌ನತ್ತ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಬೆಳಗ್ಗೆ ಹೊರತುಪಡಿಸಿ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡುಬರುತ್ತಿಲ್ಲ. ಮಧ್ಯಾಹ್ನ 3ರ ಬಳಿಕ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತದೆ.

ಒಂದು ಬಸ್‌ನಲ್ಲಿ ಕೇವಲ 30 ಜನರ ಪ್ರಯಾಣಕ್ಕೆ ಮಿತಿಗೊಳಿಸಿದ್ದರೂ ಅಷ್ಟು ಆಸನಗಳು ಕೂಡ ಭರ್ತಿಯಾಗುತ್ತಿಲ್ಲ. ಅವುಗಳು ತುಂಬದ ಹೊರತು ಬಸ್ ಓಡಿಸುವಂತಿಲ್ಲ. ಹೀಗಾಗಿ, ಚಾಲಕರು, ನಿರ್ವಾಹಕರು ಗಂಟೆಗಟ್ಟಲೇ ಕಾಯಬೇಕಿದೆ. ಆ ಕಡೆಯಿಂದ ಬರುವಾಗಲೂ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದೆ.

ನಿಲ್ದಾಣದಿಂದ ಹೊರಟ ಬಸ್ ಮಾರ್ಗ ಮಧ್ಯೆ ಎಲ್ಲಿಯೂ ನಿಲ್ಲಿಸುವಂತಿಲ್ಲ. 30-40 ಕಿ.ಮೀ. ಕ್ರಮಿಸುವ ಊರಿಗೆ ಪ್ರಯಾಣಿಸುತ್ತಿದ್ದರೆ ಅಂತಹ ಸಮಸ್ಯೆ ಏನೂ ಆಗಲ್ಲ. ಆದರೆ, 100 ಕಿ.ಮೀ.ಗಿಂತ ದೂರ ಇರುವ ಊರುಗಳಿಗೆ ಹೋಗುವುದಿದ್ದರೆ ತೊಂದರೆಯಾಗುತ್ತಿದೆ. ಮೂತ್ರ ವಿಸರ್ಜನೆಗೂ, ತಿಂಡಿ-ಚಹಾ ಕುಡಿಯಲು ಸಹ ನಿಲ್ಲಿಸುವಂತಿಲ್ಲ. ಇದು ಪ್ರಯಾಣಿಕರಿಗೂ ನಮಗೂ ಸಮಸ್ಯೆಯಾಗಿದೆ. ಊಟದ ಸಮಸ್ಯೆಯೂ ಆಗುತ್ತಿದೆ. ಮನೆಯಿಂದಲೇ ಬುತ್ತಿಕಟ್ಟಿಕೊಂಡು ಬರಬೇಕಿದೆ. ಇಲ್ಲದಿದ್ದರೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಹೋಟೆಲ್‌ನಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗಬೇಕಿದೆ.

‘ಈ ರೀತಿಯ ಕಷ್ಟಗಳು ಹಿಂದೆ ಇರಲಿಲ್ಲ. ಇದೀಗ ಅವುಗಳನ್ನು ಅನುಭವಿಸಬೇಕಾಗಿದೆ. ನಮ್ಮಂತೆ ಜನರು ಕೂಡ ನಾನಾ ತೊಂದರೆಯನ್ನು ಎದುರಿಸುತ್ತಿದ್ದಾರೆ. ನಮಗೆ ಅನ್ನಕೊಡುವ ಸಂಸ್ಥೆ ಕೂಡ ನಷ್ಟದಲಿದೆ. ಹೀಗಾಗಿ, ನಮ್ಮ ತಾಪತ್ರಯಗಳೇನೂ ದೊಡ್ಡದಲ್ಲ ಬಿಡಿ. ಇದೆಲ್ಲ ಶಾಶ್ವತವೂ ಅಲ್ಲ. ಮುಂದೆ ಎಲ್ಲ ತಿಳಿಯಾಗಲಿದೆ’ ಎಂಬುದು ಚಾಲಕರೊಬ್ಬರ ವಿಶ್ವಾಸ.

ನಮಗೆ ಇದಕ್ಕಿಂತ ಕರೊನಾ ಭಯ ಹೆಚ್ಚು ಆವರಿಸಿದೆ. ನಾವು ಬಸ್‌ನಲ್ಲಿ ದಿನವಿಡೀ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹೀಗಾಗಿ, ಮನೆಗೆ ಹೋಗಲೂ ಭಯವಾಗುತ್ತಿದೆ. ನಮ್ಮಿಂದ ನಮ್ಮ ಮಕ್ಕಳು, ವಯಸ್ಸಾದ ಪಾಲಕರಿಗೆ ಸೋಂಕು ತಗುಲಿದರೆ ಏನು ಮಾಡುವುದು? ಎಂದು ಆತಂಕದಿಂದಲೇ ನಿರ್ವಾಹಕರೊಬ್ಬರು ಪ್ರಶ್ನಿಸಿದರು. ನಿರ್ವಾಹಕರು ಪ್ರತಿ ಟ್ರಿಪ್‌ನಲ್ಲಿ ಟಿಕೆಟ್, ನೋಟು, ಚಿಲ್ಲರೆ ಕೊಡುವುದು ಮತ್ತು ಪಡೆಯುವುದು ಮಾಡಬೇಕಿದೆ. ಜತೆಗೆ ಪ್ರತಿ ಪ್ರಯಾಣಿಕರ ಮೊಬೈಲ್ ಸಂಖ್ಯೆ, ಹೆಸರು, ಊರಿನ ಮಾಹಿತಿಯನ್ನು ಸಂಗ್ರಹಿಸಬೇಕಿದ್ದು, ಇದೆಲ್ಲ ಅವರಿಗೆ ತಲೆಬಿಸಿ ಮಾಡಿದೆ. ಪ್ರಯಾಣಿಕರು ಬಸ್ ಹತ್ತಿ ಇಳಿಯುತ್ತಿರುತ್ತಾರೆ. ಯಾರಲ್ಲಿ ಕರೊನಾ ಸೋಂಕು ಇರುತ್ತದೋ ಗೊತ್ತಿಲ್ಲ. ಎಷ್ಟೇ ಹೇಳಿದರೂ ಕೆಲ ಪ್ರಯಾಣಿಕರು ಸೂಚನೆ ಪಾಲಿಸಲ್ಲ. ಕೆಲವರು ನಮ್ಮೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ. ಬಸ್‌ನಲ್ಲಿ ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳಲ್ಲ ಎಂದು ಮೈಸೂರು-ಬೆಂಗಳೂರು ಮಾರ್ಗದ ಬಸ್‌ನ ನಿರ್ವಾಹಕರೊಬ್ಬರು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟರು.

ಪ್ರತಿ ನಿಲ್ದಾಣದ ಪ್ರವೇಶದ್ವಾರದಲ್ಲಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೈಗೆ ಸ್ಯಾನಿಟೈಸರ್ ಹಾಕಲಾಗುತ್ತಿದೆ. ಇಷ್ಟಾಗಿಯೂ ನಿರ್ವಾಹಕರಲ್ಲಿರುವ ಕಳವಳ ನಿವಾರಣೆಯಾಗಿಲ್ಲ. ರಾಜ್ಯ ಸರ್ಕಾರ 30 ಲಕ್ಷ ರೂ. ವಿಮೆ ಮಾಡಿಸಿದೆ. ಆದರೆ, ವಿವಿಧೆಡೆಯಿಂದ ಬಂದ ಪ್ರಯಾಣಿಕರ ನಡುವೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭದಲ್ಲಿ ನಮಗೆ ಯಾವ ಸಮಯದಲ್ಲಿ ಸೋಂಕು ಹರಡುತ್ತದೋ ಎಂಬ ಕಳವಳ ಕಾಡುತ್ತಲೇ ಇರುತ್ತದೆ. ಮೊದಲೇ ಕಡಿಮೆ ಸಂಬಳ. ಅದರಲ್ಲೇ ಕುಟುಂಬದ ನಿರ್ವಹಣೆ ಮಾಡಬೇಕು. ಸಮಸ್ಯೆಯಾದರೆ ಗತಿ ಏನು? ಎಂಬ ಪ್ರಶ್ನೆಯನ್ನು ಕೆಲ ನಿರ್ವಾಹಕರು ಮುಂದಿಡುತ್ತಾರೆ.

ನಷ್ಟದ ಹಾದಿ..!
ಬಸ್ ಸೇವೆ ಶುರುವಾಗಿ ಮೂರು ದಿನ ಕಳೆದರೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಗುರುವಾರ ಕೊಂಚ ಸುಧಾರಣೆಯಾಗಿತ್ತು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಾಯಾಣಿಕರು ನಿಲ್ದಾಣದತ್ತ ಮುಖ ಮಾಡಲಿಲ್ಲ. ಇದರಿಂದ ಬಸ್ ನಿಲ್ದಾಣ ಖಾಲಿ ಖಾಲಿ ಹೊಡೆಯುತ್ತಿತ್ತು.
ಅಂತೆಯೇ ಆದಾಯದಲ್ಲೂ ಏರಿಕೆಯಾಗುತ್ತಿಲ್ಲ. ಈ ಹಿಂದೆ ನಿತ್ಯ 110 ಬಸ್‌ಗಳ ಸಂಚಾರದಿಂದ 85 ಲಕ್ಷ ರೂ. ಆದಾಯ ಬರುತ್ತಿತ್ತು. ಈಗ ಬರೀ 10 ಲಕ್ಷ ರೂ. ಆದಾಯಕ್ಕಿಳಿದಿದೆ. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರತಿ ದಿನ 450 ಬಸ್‌ಗಳು ಸಂಚರಿಸಿದ್ದವು. ಅವುಗಳ ಈಗ 50ಕ್ಕೆ ಇಳಿದಿದೆ.

ಈಗಾಗಲೇ ನಷ್ಟವನ್ನು ಎದುರಿಸುತ್ತಿದ್ದು, ಕರೊನಾ ಹರಡದಂತೆ ತಡೆಯಲು ಪ್ರತಿ ಬಸ್‌ನಲ್ಲಿ 30 ಸೀಟ್‌ಗಳನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯದ್ದರೆ ನಷ್ಟ ಮತ್ತಷ್ಟು ಹೆಚ್ಚಾಗಲಿದೆ. ಇದನ್ನು ನಮ್ಮ ಸಿಬ್ಬಂದಿ, ಪ್ರಯಾಣಿಕರು ಅರ್ಥ ಮಾಡಿಕೊಳ್ಳಬೇಕು.
ಅಶೋಕ್‌ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net