ಎಸ್ಸೆಸ್ಸೆಲ್ಸಿ ಫಲಿತಾಂಶ ಕ್ಷಿಣಿಸಲು ಕಾರಣವೇನು?

kgf
Published on

ಕೆಜಿಎಫ್​- ಒಂದು ಕಾಲದಲ್ಲಿ ಲಿಟಲ್​ ಇಂಗ್ಲೆಂಡ್​ ಎಂದು ಖ್ಯಾತಿ ಗಳಿಸಿ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದ ಕೆಜಿಎಫ್​ ತಾಲೂಕಿನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾಗಲು ಕಾರಣವೇನು?, ಶಿಕ್ಷಕರಿಗೆ ಸರ್ಕಾರದಿಂದ ಏನು ಕಡಿಮೆಯಾಗಿದೆ? ಎಂದು ಶಾಸಕಿ ರೂಪಕಲಾ ಅವರು ಬಿಇಒ ಮತ್ತು ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಮುಖ್ಯಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಫಲಿತಾಂಶ ತೀರ ಕೆಳಮಟ್ಟಕ್ಕೆ ಕುಸಿದ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೂರು ರಾಜ್ಯಗಳ ಗಡಿ ಪ್ರದೇಶವಾದ ಕೆಜಿಎಫ್​ ತಾಲೂಕಿಗೆ 2024&-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.54 ಫಲಿತಾಂಶ ಬಂದಿದ್ದು, ಇದರಲ್ಲಿ ಶೇ.46 ವಿದ್ಯಾರ್ಥಿಗಳು ಕನ್ನಡ ಭಾಷಾ ವಿಷಯದಲ್ಲಿ ಅನುತೀರ್ಣರಾಗಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದನ್ನು ಕಂಡು ಹಿಡಿದು, ಮಕ್ಕಳ ಸ್ಥಿತಿಗತಿಗಳ ಅಧ್ಯಯನ ನಡೆಸಿ, ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರುವಂತೆ ಮಕ್ಕಳನ್ನು ಸಜ್ಜುಗೊಳಿಸಿ ಕನಿಷ್ಠ ಅಂಕ ಪಡೆದು ಉತ್ತೀರ್ಣರಾಗುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಮುಂದಿನ ಪರೀಕ್ಷೆಗಳಲ್ಲಿ ಶಿಕ್ಷಕರು ವಿಶೇಷ ತರಗತಿ ಕೈಗೊಂಡು, ತಿಂಗಳಿಗೊಮ್ಮೆ ಮಾಕ್​ ಟೆಸ್ಟ್​ ನೀಡಿ ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿಸಿ ಮುಖ್ಯಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಶೇ.100 ಫಲಿತಾಂಶ ಬರುವಂತೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮ ರೀತಿಯಲ್ಲಿದ್ದು, ಕಳಪೆ ಸಾಧನೆ ಮಾಡಿದ್ದ ಖಾಸಗಿ ಶಾಲೆಗಳ ಮುಖ್ಯಶಿಕ್ಷಕರನ್ನು ಸಭೆಗೆ ಕರೆದಿರಲಿಲ್ಲ ಎಂಬ ಮಾತು ಶಿಕ್ಷಕ ವಲಯದಲ್ಲಿ ಕೇಳಿಬಂದಿತ್ತು. ಪ್ರೌಢಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ವರ್ಣಮಾಲೆಯ ಪರಿಜ್ಞಾನವೇ ಇರುವುದಿಲ್ಲ. ಹೀಗೆ ಬರುವ ಮಕ್ಕಳಿಂದ ಏನು ಫಲಿತಾಂಶ ತಾನೇ ನಿರೀಕ್ಷಸಲು ಸಾಧ್ಯ ಎಂಬ ಮಾತುಗಳು ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net