

ಹುಬ್ಬಳ್ಳಿ : ಜನಸಾಮಾನ್ಯರ ಮೇಲೆ 48 ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿದ್ದಿರುವ ಬರೆಯನ್ನು ಮರೆಸುವುದಕ್ಕಾಗಿ ಮೇ 1ರಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪ್ರಶ್ನೆ ಹಾಕಿರುವ ಪ್ರಲ್ಹಾದ ಜೋಶಿ, ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆಯೆ? ರಾಜ್ಯದ ಆರ್ಥಿಕ ದುರ್ವ್ಯವಸ್ಥೆಯನ್ನು ಜನರಿಂದ ಮರೆಮಾಚಲು ಈ ಪ್ರತಿಭಟನೆಯೆ? ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ, ಅಭಿವೃದ್ಧಿಯನ್ನೇ ಕಾಣದೆ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವೆ ಈ ಪ್ರತಿಭಟನೆ ಎಂದು ಖಾರವಾಗಿ ಕೇಳಿದ್ದಾರೆ.
ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಇಂದು 5.5 ಲಕ್ಷ ಕೋಟಿ ರೂ. ಸಾಲದ ಸುಳಿಗೆ ದಬ್ಬಿರುವ ಸಾಧನೆಯ ಪ್ರದರ್ಶನವೆ ಈ ಪ್ರತಿಭಟನೆ ಎಂದು ಸಹ ಮುಖ್ಯಮಂತ್ರಿಯವರನ್ನು ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.